HomeIndiaವಂದೇ ಭಾರತ್ ಶೌಚಾಲಯದಲ್ಲಿ ಹಾವು ಬಿಟ್ಟಿದ್ದ ಭೂಪ ಅಂದರ್: 6 ವಾರಗಳ ನಂತರ ಸಿಸಿಟಿವಿಯಲ್ಲಿ ಬಯಲಾಯ್ತು...

ವಂದೇ ಭಾರತ್ ಶೌಚಾಲಯದಲ್ಲಿ ಹಾವು ಬಿಟ್ಟಿದ್ದ ಭೂಪ ಅಂದರ್: 6 ವಾರಗಳ ನಂತರ ಸಿಸಿಟಿವಿಯಲ್ಲಿ ಬಯಲಾಯ್ತು ಕಿಲಾಡಿ ಆಟ!

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವು ಪತ್ತೆಯಾಗಿದ್ದ ನಿಗೂಢ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ಪಡೆ (RPF) ಭರ್ಜರಿ ಯಶಸ್ಸು ಕಂಡಿದೆ. ಘಟನೆ ನಡೆದು ಆರು ವಾರಗಳ ನಂತರ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಸಿಕ್ ಜಿಲ್ಲೆಯ ನಿವಾಸಿ ಜಗನ್ ಅರ್ಜುನ್ ಭಾಲೆ (37) ಎಂಬಾತನನ್ನು ಮುಂಬ್ರಾದಲ್ಲಿ ಬಂಧಿಸಲಾಗಿದೆ.

ಏನಿದು ಘಟನೆ? 2025ರ ಡಿಸೆಂಬರ್ 27ರಂದು ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಿ-16 ಕೋಚ್‌ನ ಶೌಚಾಲಯದಲ್ಲಿ ಪ್ರಯಾಣಿಕರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದರು. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ರೈಲಿನಲ್ಲಿ ಆತಂಕ ಮನೆಮಾಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ಶೌಚಾಲಯವನ್ನು ಸೀಲ್ ಮಾಡಿದ್ದರು. ರೈಲು ಸೋಲಾಪುರ ತಲುಪಿದ ನಂತರ ವೃತ್ತಿಪರ ಹಾವು ಹಿಡಿಯುವವರ ಸಹಾಯದಿಂದ ಸುಮಾರು 2.5 ಅಡಿ ಉದ್ದದ ಕೇರೆ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು.

ಸಿಸಿಟಿವಿಯಲ್ಲಿ ಬಯಲಾದ ಕಿಲಾಡಿ ಆಟ: ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಭಾವಿಸಲಾಗಿತ್ತು. ಆದರೆ ಆರ್‌ಪಿಎಫ್ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಾಗ ಅಸಲಿ ಸತ್ಯ ಬಯಲಾಗಿದೆ. ಥಾಣೆ ನಿಲ್ದಾಣದಲ್ಲಿ ರೈಲು ಹತ್ತಿದ್ದ ಆರೋಪಿ ಜಗನ್, ತನ್ನ ಬಳಿ ತಂದಿದ್ದ ಕೇರೆ ಹಾವನ್ನು ಉದ್ದೇಶಪೂರ್ವಕವಾಗಿ ಶೌಚಾಲಯದಲ್ಲಿ ಬಿಟ್ಟು ಬಳಿಕ ರೈಲಿನಿಂದ ಇಳಿದು ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ವಿಚಾರಣೆ ವೇಳೆ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಠಿಣ ಕ್ರಮ: ಆರೋಪಿಯ ವಿರುದ್ಧ ರೈಲ್ವೆ ಕಾಯ್ದೆ 1989 ರ ಸೆಕ್ಷನ್ 145(B), 147 ಮತ್ತು 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲ್ಯಾಣ್‌ನ ರೈಲ್ವೆ ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಘಟನೆಯು ವಂದೇ ಭಾರತ್‌ನಂತಹ ಹೈಟೆಕ್ ರೈಲುಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆಯಾದರೂ, ರೈಲಿನಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆಯು ಅಪರಾಧಿಯನ್ನು ಪತ್ತೆಹಚ್ಚಲು ಪ್ರಮುಖ ಪಾತ್ರ ವಹಿಸಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular