ಬೆಂಗಳೂರು: ಶಕ್ತಿ ಯೋಜನೆಯಡಿ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸಾರಿಗೆ ಇಲಾಖೆಯಿಂದ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರವೇ ಸ್ಮಾರ್ಟ್ ಕಾರ್ಡ್ ಪೂರೈಕೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ನಾಲ್ಕು ನಿಗಮಗಳಲ್ಲಿಯೂ ಸ್ಮಾರ್ಟ್ ಕಾರ್ಡ್ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
ಫಲಾನುಭವಿಗಳಿಂದ ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು ನಿರ್ಧರಿಸಲಾಗಿದ್ದು, ಅರ್ಜಿ ಸಲ್ಲಿಕೆ ಯಾವ ರೀತಿ ಇರಬೇಕು ಎನ್ನುವುದನ್ನು ಶೀಘ್ರವೇ ಪ್ರಕಟಿಸಲಾಗುವುದು. ಬಸ್ ನಿಲ್ದಾಣಗಳು, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. 4 ನಿಗಮಗಳ ಬಸ್ ಗಳಲ್ಲಿಯೂ ಬಳಸುವಂತೆ ಸ್ಮಾರ್ಟ್ ಕಾರ್ಡ್ ಇರುತ್ತದೆ ಎಂದು ಹೇಳಿದ್ದಾರೆ.

