ಕೊಲಂಬೊದ ಸಿನ್ಹಳೀಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 22ನೇ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ಒಮನ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿ ಒಮನ್ಗೆ 236 ರನ್ ಗುರಿ ನೀಡಿದೆ. ಇದು ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಕಲೆಹಾಕಿದ ಎರಡನೇ ಅತ್ಯಧಿಕ ರನ್ ಮೊತ್ತವಾಗಿದೆ. 2007ರ ಟಿ ಟ್ವೆಂಟಿ ವಿಶ್ವಕಪ್ನಲ್ಲಿ ಶ್ರೀಲಂಕಾ ಕೀನ್ಯಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿತ್ತು.
ಐರ್ಲೆಂಡ್ 64 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಟಿಮ್ ಟೆಕ್ಟರ್ 5, ರಾಸ್ ಅಡೈರ್ 14, ಹ್ಯಾರಿ ಟೆಕ್ಟರ್ 14, ಕರ್ಟಿಸ್ ಕ್ಯಾಂಪರ್ 12 ರನ್ ಗಳಿಸಿದರು. ಬಳಿಕ ಗ್ಯಾರೆಥ್ ಡೆಲಾನಿ ಹಾಗೂ ಲಾರ್ಕನ್ ಟಕ್ಕರ್ 101 ರನ್ಗಳ ಜತೆಯಾಟವನ್ನಾಡಿ ತಂಡವನ್ನು ಒಳ್ಳೆಯ ಹಂತಕ್ಕೆ ತಂದರು. ಗ್ಯಾರೆಥ್ ಡೆಲಾನಿ 30 ಎಸೆತಗಳಲ್ಲಿ 56 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಒಂದಾದ ಲಾರ್ಕನ್ ಟಕ್ಕರ್ ಹಾಗೂ ಜಾರ್ಕ್ ಡಾಕ್ರೆಲ್ 19 ಎಸೆತಗಳಲ್ಲಿ 70 ರನ್ ಜತೆಯಾಟವನ್ನಾಡಿ ಅಬ್ಬರಿಸಿದರು. ಲಾರ್ಕನ್ ಟಕ್ಕರ್ 51 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರೆ, ಜಾರ್ಜ್ ಡಾಕ್ರೆಲ್ 9 ಎಸೆತಗಳಲ್ಲಿ 5 ಸಿಕ್ಸರ್ ಸಹಿತ ಅಜೇಯ 35 ರನ್ ಗಳಿಸಿದರು.
ಒಮನ್ ಪರ ಶಕೀಲ್ ಅಹ್ಮದ್ ಮೂರು ವಿಕೆಟ್, ಶಾ ಫೈಸಲ್ ಹಾಗೂ ಆಮೀರ್ ಕಲೀಮ್ ತಲಾ ಒಂದೊಂದು ವಿಕೆಟ್ ಪಡೆದರು.

