ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಯ ಸಂಚಿನ ಪ್ರಕರಣದಲ್ಲಿ ಭಾರಿ ಬೆಳವಣಿಗೆಯಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ, ಭಾರತೀಯ ಪ್ರಜೆಯಾದ ನಿಕಿಲ್ ಗುಪ್ತಾ (54) ಅಮೆರಿಕದ ನ್ಯಾಯಾಲಯದಲ್ಲಿ ತನ್ನ ಮೇಲಿನ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಈ ಹತ್ಯೆ ಸಂಚಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ಶುಕ್ರವಾರ ಮ್ಯಾನ್ಹ್ಯಾಟನ್ನ ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನಿಕಿಲ್ ಗುಪ್ತಾ ತನ್ನ ಮೇಲೆ ಹೊರಿಸಲಾದ ಮೂರು ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಒಪ್ಪಿಕೊಂಡರು. ಹತ್ಯೆಗಾಗಿ ಸುಪಾರಿ ನೀಡುವುದು.ಹತ್ಯೆಗಾಗಿ ಸಂಚು ರೂಪಿಸುವುದು.ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಸಂಚು ಸೇರಿ ಮೂರು ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಒಪ್ಪಿಕೊಂಡರು.
ನ್ಯಾಯಾಲಯದಲ್ಲಿ ಅವರು, “ಹೌದು, ನಾನು ಈ ಅಪರಾಧಗಳನ್ನು ಮಾಡಿದ್ದೇನೆ” ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಅವರು ತಾವು ನಿರ್ದೋಷಿ ಎಂದು ವಾದಿಸಿದ್ದರು, ಆದರೆ ಈಗ ಸಂಚಿನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.
ನಿಕಿಲ್ ಗುಪ್ತಾಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು?
ಅಮೆರಿಕದ ಅಟಾರ್ನಿ ಕಚೇರಿಯ ವಕ್ತಾರರ ಪ್ರಕಾರ, ಗುಪ್ತಾ ಒಪ್ಪಿಕೊಂಡಿರುವ ಈ ಮೂರೂ ಆರೋಪಗಳು ಅತ್ಯಂತ ಗಂಭೀರವಾದುವು. ಇವುಗಳಿಗೆ ಒಟ್ಟಾರೆಯಾಗಿ ಗರಿಷ್ಠ 40 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಶಿಕ್ಷೆಯ ಅಧಿಕೃತ ಘೋಷಣೆಯು ಮೇ 29 ರಂದು ನಡೆಯುವ ಸಾಧ್ಯತೆಯಿದೆ.
ನಿಕಿಲ್ ಗುಪ್ತಾ ಅವರು 2023ರಲ್ಲಿ ನ್ಯೂಯಾರ್ಕ್ನಲ್ಲಿರುವ ಪನ್ನೂ ಹತ್ಯೆಗಾಗಿ ಹಂತಕನಿಗೆ (Hitman) 15,000 ಡಾಲರ್ ಮುಂಗಡ ಹಣ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.ಆದರೆ, ಅವರು ಸಂಪರ್ಕಿಸಿದ್ದ ವ್ಯಕ್ತಿ ಅಮೆರಿಕದ ತನಿಖಾ ಸಂಸ್ಥೆಯ ಅಂಡರ್ಕವರ್ ಏಜೆಂಟ್ ಆಗಿದ್ದರಿಂದ ಈ ಸಂಚು ವಿಫಲವಾಯಿತು. ಅಮೆರಿಕದ ಕಾನೂನು ಅಧಿಕಾರಿಗಳ ಪ್ರಕಾರ, ನಿಕಿಲ್ ಗುಪ್ತಾನನ್ನು ಈ ಕೆಲಸಕ್ಕಾಗಿ ಭಾರತ ಸರ್ಕಾರದ ಮಾಜಿ ಉದ್ಯೋಗಿಯೊಬ್ಬರು ನೇಮಿಸಿದ್ದರು ಎಂದು ಆರೋಪಿಸಲಾಗಿದೆ.
ಯಾರು ಈ ಗುರುಪತ್ವಂತ್ ಸಿಂಗ್ ಪನ್ನೂ?
ಪನ್ನೂ ಅಮೆರಿಕ ಮತ್ತು ಕೆನಡಾ ಎರಡೂ ದೇಶಗಳ ಪೌರತ್ವ ಹೊಂದಿರುವ ವ್ಯಕ್ತಿ. ಈತ ‘ಸಿಖ್ಸ್ ಫಾರ್ ಜಸ್ಟೀಸ್’ (SFJ) ಸಂಘಟನೆಯ ಮೂಲಕ ಖಲಿಸ್ತಾನ್ ಚಳವಳಿಯನ್ನು ಮುನ್ನಡೆಸುತ್ತಿದ್ದಾನೆ. ಭಾರತ ಸರ್ಕಾರ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ.
ನಿಕಿಲ್ ಗುಪ್ತಾ ಹಿನ್ನೆಲೆ:
ಭಾರತೀಯ ಪ್ರಜೆಯಾದ ನಿಕಿಲ್ ಗುಪ್ತಾನನ್ನು ಅಮೆರಿಕ ಸರ್ಕಾರದ ಕೋರಿಕೆಯ ಮೇರೆಗೆ 2023ರಲ್ಲಿ ಜೆಕ್ ಗಣರಾಜ್ಯದಲ್ಲಿ (Czech Republic) ಬಂಧಿಸಲಾಗಿತ್ತು. ನಂತರ ಜೂನ್ 2024ರಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಯಿತು. ಸದ್ಯ ಅವರು ಬ್ರೂಕ್ಲಿನ್ನ ಜೈಲಿನಲ್ಲಿದ್ದಾರೆ.

