ಕೊಡಗು ಪ್ರವಾಸ ಹೋಗುವ ಪ್ರವಾಸಿಗರಿಗರಿಗೆ ಮಹತ್ವದ ಅಪ್‌ಡೇಟ್ ಒಂದಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಪ್ರವಾಸಿಗರು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಈ ಕುರಿತು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಆದೇಶಿಸಿದ್ದಾರೆ.ಮಡಿಕೇರಿ ಪ್ರಾದೇಶಿಕ ವಿಭಾಗದ ಮಡಿಕೇರಿ ವಲಯದ ವ್ಯಾಪ್ತಿಯಲ್ಲಿ ಬರುವ ಮಾಂದಲ್ ಪಟ್ಟಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಪ್ರವಾಸಿ ತಾಣದಲ್ಲಿ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದರಿಂದ ಫೆಬ್ರವರಿ, 16 ರಿಂದ 28 ರವರೆಗೆ ಮಾಂದಲ್ ಪಟ್ಟಿ ಪ್ರವಾಸಿ ತಾಣದಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹಾಗೂ ಯಾವುದೇ ವಾಹನಕ್ಕೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಮಾಂದಲ್ ಪಟ್ಟಿ: ಮಾಂದಲ್ ಪಟ್ಟಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಒಂದು ಭವ್ಯವಾದ ಮತ್ತು ವಿಶಿಷ್ಟವಾದ ಪ್ರವಾಸಿ ತಾಣವಾಗಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಪುಷ್ಪಗಿರಿ ಅರಣ್ಯದ ಹುಲ್ಲುಗಾವಲುಗಳ ಮೇಲಿದೆ.
1,800 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಸ್ಥಳವನ್ನು ಮುಗಿಲ್-ಪೆಟ್ ಎಂದು ಕರೆಯಲಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದ ವೀಕ್ಷಣೆಗೆ ಇದು ಪ್ರಸಿದ್ಧ ಸ್ಥಳವಾಗಿದೆ.
ಕೂರ್ಗ್‌ನಲ್ಲಿ ಕಾಫಿ ಎಸ್ಟೇಟ್‌ಗಳ ಮೂಲಕ ಪ್ರಯಾಣ ಮಾಡಿದ ಬಳಿಕ ಈ ಸ್ಥಳ ನಿಮ್ಮ ಪ್ರವಾಸಕ್ಕೆ ಸ್ಮರಣೀಯ ಅನುಭವ, ಪರಿಪೂರ್ಣ ಸ್ಪರ್ಶವನ್ನು ನೀಡುತ್ತದೆ. ಮಾಂದಲ್ ಪಟ್ಟಿಯು ಮಡಿಕೇರಿ ಇಂದ ಸುಮಾರು 18 ಕಿ.ಮೀ. ದೂರದಲ್ಲಿದೆ.
ಕೂರ್ಗ್‌ನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಪ್ರದೇಶ ಅಬ್ಬೆ ಜಲಪಾತಕ್ಕೆ ಹೋಗುವ ದಾರಿಗೆ ಸೇರಿರುತ್ತದೆ.

