ಬೆಳಗಾವಿ: ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ 500 ರೂ. ಗಡಿ ದಾಟಿದ್ದು, ಉತ್ತಮ ತಳಿಯ ಮೆಣಸಿನಕಾಯಿಗೆ 700 ರೂ.ವರೆಗೂ ದರ ಇದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಮಾರುಕಟ್ಟೆಗೆ ಮಾರಾಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಬಾರದ ಹಿನ್ನೆಲೆಯಲ್ಲಿ ಮೆಣಸಿನಕಾಯಿ ದರ ಏರಿಕೆಯಾಗಿದೆ. ಕಳೆದ ವರ್ಷ ಕೆಜಿಗೆ 200 ರಿಂದ 300 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಒಣ ಮೆಣಸಿನಕಾಯಿ ಈಗ 500 ರೂ. ಗಡಿ ದಾಟಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.
ನಂಬರ್ ಒನ್ ಕ್ವಾಲಿಟಿಯ ಒಣ ಮೆಣಸಿನಕಾಯಿ ದರ ಬೆಳಗಾವಿ ಮಾರುಕಟ್ಟೆಯಲ್ಲಿ ಕೆಜಿಗೆ 650 ರಿಂದ 700 ರೂ., ನಂಬರ್ 2 ಕ್ವಾಲಿಟಿಯ ಮೆಣಸಿನಕಾಯಿ 400 ರಿಂದ 450 ರೂ.ಗೆ ಮಾರಾಟವಾಗುತ್ತಿದೆ. ಸಂಕೇಶ್ವರ ಮತ್ತು ಗುಂಟೂರ ಜವಾರಿ ಮೆಣಸಿನಕಾಯಿ 350 ರೂಪಾಯಿಗೆ ಮಾರಾಟವಾಗುತ್ತಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಜನ ಮೆಣಸಿನಕಾಯಿ ಸಂಗ್ರಹಿಸುತ್ತಾರೆ. ವರ್ಷಕ್ಕೆ ಆಗುವಷ್ಟು ಮೆಣಸಿನ ಕಾಯಿಯನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ದರ ಹೆಚ್ಚಾಗಿರುವುದರಿಂದ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಬೆಳಗಾವಿಗೆ ವ್ಯಾಪಾರಿಗಳು ರಾಜ್ಯದ ವಿವಿಧೆಡೆಯಿಂದ ಮಾರಾಟಕ್ಕೆ ಮೆಣಸಿನ ಕಾಯಿ ತರುತ್ತಾರೆ. ತಾಜಾ ಮೆಣಸಿನಕಾಯಿ 500 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮೆಣಸಿನಕಾಯಿ ಬರುತ್ತಿರುವುದರಿಂದ ದರ ಏರು ಗತಿಯಲ್ಲಿ ಸಾಗಿದೆ ಎಂದು ಹೇಳಲಾಗಿದೆ.

