ತುಮಕೂರು: ಹೊಸದಾಗಿ ಖರೀದಿಸಿದ್ದ ಹಿಟಾಚಿ ಕೇಲವೇ ತಿಂಗಳಲ್ಲಿ ಕೆಟ್ಟು ನಿಂತಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕ ಹಿಟಾಚಿ ಶೋರೂಂ ಗೆ ಬಂದು ಶೋರೂಂ ಗೆ ಬೀಗ ಹಾಕಿ ತೆರೆಳಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಹಿಟಾಚಿ ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿ ಪದೇ ಪದೇ ಕೆಟ್ಟು ನಿಲ್ಲುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಗ್ರಾಹಕ ಶೋರೂಂಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಬಳಿಯ ಟಾಟಾ ಹಿಟಾಚಿ ಶೋರೂಂಗೆ ಗ್ರಾಹಕರು ಬೀಗ ಜಡಿದಿದ್ದಾರೆ. ಶೋರೂಮ್ ನಲ್ಲಿದ್ದ ಸಿಬ್ಬಂದಿಅಗ್ಳನ್ನು ಹೊರ ಕಳುಹಿಸಿದ ಗ್ರಾಹಕ ಶೋ ರೂಂ ಗೆ ಬೀಗ ಹಾಕಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಗಿರೀಶ್ ಎಂಬವರು 5 ತಿಂಗಳ ಹಿಂದೆ ಸುಮಾರು 52 ಲಕ್ಷ ರೂಪಾಯಿ ನೀಡಿ ಹೊಸ ಹಿಟಾಚಿ ಖರೀದಿಸಿದ್ದರು. 7 ಲಕ್ಷ ರೂಪಾಯಿ ಡೌನ್ ಪೇಮೆಂಟ್ ನೀಡಿ, ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಕಟ್ಟುತ್ತಿದ್ದರು. ಆದರೆ ಯಂತ್ರ ಖರೀದಿಸಿದ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಲಸ ಮಾಡಲಾಗದೇ ಹಿಟಾಚಿ ನಿಂತಲ್ಲೇ ನಿಂತಿದೆ.
ಹಿಟಾಚಿಯಲ್ಲಿ ಸಮಸ್ಯೆಯಾಗಿದೆ ಎಂದು ಹಲವು ಬಾರಿ ಶೋರೂಂ ಹಾಗೂ ಕಂಪನಿಯನ್ನು ಸಂಪರ್ಕಿಸಿದರೂ ಸಮರ್ಪಕ ಸ್ಪಂದನೆ ಸಿಗಲಿಲ್ಲ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅಲೆದಾಡಿದರೂ ಹಿಟಾಚಿ ಸರಿಪಡಿಸಲಾಗಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಬೇಸತ್ತ ಗಿರೀಶ್ ಹಾಗೂ ಇತರರು ಶೋರೂಂ ಗೆ ಆಗಮಿಸಿದ್ದಾರೆ. ಹಿಟಾಚಿ ತಾಂತ್ರಿಕ ಸಮಸ್ಯೆ ಪರಿಹರಿಸಿಕೊಡಿ ಎಂದು ಹೇಳಿದ್ದಾರೆ. ಆದರೆ ಶೋ ರೂಂ ಕಡೆಯವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇದರಿಂದ ರೊಚ್ಚಿಗೆದ್ದ ಗಿರೀಶ್, ಶೋ ರೂಂ ನಲ್ಲಿದ್ದ ಸಿಬ್ಬಂದಿ ಹೊರ ಬರುವಂತೆ ಕರೆದಿದ್ದಾರೆ. ಎಲ್ಲರನ್ನು ಹೊರ ಕಳುಹಿಸಿ ಶೋ ರೂಂ ಗೆ ಬೀಗ ಹಾಕಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಅಲ್ಲದೆ, ಶೋರೂಂ ಬಾಗಿಲಿಗೆ ಹಿಟಾಚಿ ಯಂತ್ರವನ್ನು ಅಡ್ಡಲಾಗಿ ನಿಲ್ಲಿಸಿ ಗಮನ ಸೆಳೆದದ್ದಾರೆ.
ತಕ್ಷಣ ಹಿಟಾಚಿ ಸರಿಪಡಿಸಿ ಕೊಡಬೇಕು, ಇಲ್ಲವಾದರೆ ನಾವು ಕಟ್ಟಿದ ಹಣವನ್ನು ವಾಪಸ್ ಕೊಡಬೇಕು. ಯಂತ್ರ ಖರೀದಿ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇನೆ. ಕಂಪನಿ ಹೇಳುವುದೊಂದು, ಖರೀದಿಸಿದ ನಂತರ ಮಾಡುವುದೊಂದು ಎಂದು ಗಿರೀಶ್ ಕಿಡಿಕಾರಿದ್ದಾರೆ.

