ಮೈಸೂರು: ಗ್ರಾಮ ದೇವತೆ ಜಾತ್ರೆ ವೇಳೆ ಮಹಿಳೆಯರು, ಯುವತಿಯರ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಮಾಡಿದರೆ ಹುಷಾರ್. ಭಾರಿ ದಂಡ ವಿಧಿಸಲಾಗುವುದು ಎಂದು ಗ್ರಾಮದಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಗೋಳೂರು ಗ್ರಾಮದಲ್ಲಿ ನಡೆಯಲಿರುವ ಗ್ರಾಮ ದೇವತೆ ಜಾತ್ರೆ ಹಿನ್ನೆಲೆ ಗ್ರಾಮಸ್ಥರು ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ವಿಡಿಯೋ ಚಿತ್ರೀಕರಣ ಹಾಗೂ ಕುಡಿದು ಗಲಾಟೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ.
ಅದರಲ್ಲಿಯೂ ಜಾತ್ರೆ ವೇಳೆ ಮಹಿಳೆಯರು ಹಾಗೂ ಯುವತಿಯರ ವಿಡಿಯೋ ತೆಗೆದರೆ ಅಥವಾ ಕುಡಿದು ಗಲಾಟೆ ಮಾಡಿದರೆ ಅಂತವರಿಗೆ 30 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಗ್ರಾಮಗಳಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿದೆ.
ಇಂದಿನಿಂದ ಮೂರು ದಿನಗಳ ಕಾಲ ಗೋಳೂರು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಡಂಗುರ ಬಾರಿಸಿ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ನಿವಾಸಿ ಜವರ ಎಂಬುವರ ಮೂಲಕ ತಮಟೆ ಬಾರಿಸಿ ಗ್ರಾಮಾದ್ಯಂತ ಕಟ್ಟು ನಿಟ್ಟಿನ ನಿಯಮಗಳನ್ನು ಪ್ರಕಟಿಸಲಾಗಿದ್ದು, ಜಾತ್ರೆ ಶಾಂತಿಯುತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಮುಂಜಾಗೃತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

