ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದು ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ಸೆಣಸುವ ಮೂಲಕ ತನ್ನ ಟಿ20 ವಿಶ್ವಕಪ್ 2026ರ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿದ್ದ ಏಡನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
2024ರ ವಿಶ್ವಕಪ್ ಫೈನಲ್ನಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಕಹಿ ನೆನಪನ್ನು ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಹರಿಣಗಳ ಪಡೆ ಸಜ್ಜಾಗಿದೆ. ತಂಡದ ಪ್ರಮುಖ ಆಟಗಾರ ಡೇವಿಡ್ ಮಿಲ್ಲರ್ ಸಂಪೂರ್ಣ ಫಿಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತಂಡದ 15 ಸದಸ್ಯರ ಪೈಕಿ 9 ಮಂದಿ ಹಳೆಯ ಆಟಗಾರರೇ ಇರುವುದು ತಂಡದ ಬಲಕ್ಕೆ ಕಾರಣವಾಗಿದೆ. ನಾಯಕ ಮಾರ್ಕ್ರಾಮ್ ಪ್ರಕಾರ, ಮಿಲ್ಲರ್ ಅವರ ಲಯ ಮತ್ತು ಆತ್ಮವಿಶ್ವಾಸ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ಮತ್ತೊಂದೆಡೆ, ಕೆನಡಾ ತಂಡವು ದಿಲ್ಪ್ರೀತ್ ಬಾಜ್ವಾ ಅವರ ನಾಯಕತ್ವದಲ್ಲಿ ಹೊಸ ರೂಪದಲ್ಲಿ ಕಣಕ್ಕಿಳಿಯುತ್ತಿದೆ. ಕಳೆದ ಐದು ಅಧಿಕೃತ ಟಿ20 ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ಕೆನಡಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸಾದ್ ಬಿನ್ ಜಾಫರ್ ಮತ್ತು ನವನೀತ್ ಧಲಿವಾಲ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದು, ದಕ್ಷಿಣ ಆಫ್ರಿಕಾಕ್ಕೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಗ್ರೂಪ್-ಡಿ ಹಂತದ ಈ ಪಂದ್ಯವು ಕುತೂಹಲ ಕೆರಳಿಸಿದ್ದು, ಎರಡು ತಂಡಗಳಿಗೂ ಶುಭಾರಂಭ ಮಾಡುವುದು ಅನಿವಾರ್ಯವಾಗಿದೆ.
ಸಂಭಾವ್ಯ ಆಟಗಾರರ ಪಟ್ಟಿ: ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಏಡನ್ ಮಾರ್ಕ್ರಾಮ್ (ನಾಯಕ), ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್/ಜೇಸನ್ ಸ್ಮಿತ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ.
ಕೆನಡಾ: ದಿಲ್ಪ್ರೀತ್ ಬಾಜ್ವಾ (ನಾಯಕ), ಯುವರಾಜ್ ಸಾಮ್ರಾ, ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ, ಕನ್ವರ್ಪಾಲ್ ತತ್ಗೂರ್, ಜಸ್ಕರನ್ ಸಿಂಗ್, ಸಾದ್ ಬಿನ್ ಜಾಫರ್, ಶಿವಂ ಶರ್ಮಾ, ಡಿಲನ್ ಹೈಲಿಗರ್, ಕಲೀಮ್ ಸನಾ.

