ತಮಿಳುನಾಡು ವಿಧಾನಸಭೆ ಚುನಾವಣೆ 2026ರ ತಯಾರಿ ಜೋರಾಗಿದೆ. 234 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕುತೂಹಲ ಮೂಡಿಸಿರುವುದು ನಟ ವಿಜಯ್ ಸ್ಥಾಪನೆ ಮಾಡಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ. ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಈಗಾಗಲೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ‘ವಿಷಲ್’ ಚಿಹ್ನೆಯನ್ನು ನೀಡಿದೆ. ಪಕ್ಷ ವಿಜಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಯಾವ ಕ್ಷೇತ್ರದಿಂದ ವಿಜಯ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.
ನಟ ವಿಜಯ್ ಈಗಾಗಲೇ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ಪ್ರಚಾರ ಸಭೆಗೆ ಸೇರುವ ಜನರ ಸಂಖ್ಯೆ ನೋಡಿ ಆಡಳಿತ ಪಕ್ಷ ಡಿಎಂಕೆ ನಡುಗಿ ಹೋಗಿದೆ. ಸದ್ಯ ಅವರು ಕ್ಷೇತ್ರದ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ಪಕ್ಷದ ನಾಯಕರ ಜೊತೆ ಈ ಕುರಿತು ಅವರು ಚರ್ಚೆ ನಡೆಸುತ್ತಿದ್ದಾರೆ.
ರಾಜಧಾನಿಯಿಂದ ಕಣಕ್ಕೆ?: ತಮಿಳುನಾಡು ರಾಜಧಾನಿ ಚೆನ್ನೈ. ಚೆನ್ನೈ ನಗರದ ವ್ಯಾಪ್ತಿಯಲ್ಲಿ 16 ವಿಧಾನಸಭಾ ಕ್ಷೇತ್ರಗಳಿವೆ. ವಿಜಯ್ ಈ ಕ್ಷೇತ್ರಗಳಲ್ಲಿಯೇ ಒಂದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ವಿಜಯ್ ನಿಲ್ಲುವ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟ ಕಾಯುತ್ತಿದೆ.
ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ಚುನಾವಣೆ ಎದುರಿಸಲಾಗುತ್ತದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಘೋಷಣೆ ಮಾಡಿದೆ. ಆದ್ದರಿಂದ ನಟ ವಿಜಯ್ ಪ್ರಬಲವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಲ್ಲಿಂದ ಸ್ಪರ್ಧಿಸಲಿದ್ದಾರೆ.
ಟಿವಿಕೆ ಪಕ್ಷದ ಮುಖಸ್ಥ ತಮಿಳುನಾಡು ರಾಜ್ಯದ ಮಧ್ಯ ಭಾಗದ ಕ್ಷೇತ್ರವೊಂದರಿಂದ ಸ್ಪರ್ಧಿಸಬಹುದು ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಶೀಘ್ರದಲ್ಲಿಯೇ ಕ್ಷೇತ್ರದ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿರುಗಂಬಕ್ಕಂ, ವೇಲಾಚರಿ, ವಿಕ್ರವಂಡಿ, ವೇದಾರಣ್ಯಂ ಮತ್ತು ನಾಗಪತ್ತಿನಂ ಸೇರಿದಂತೆ ಹಲವಾರು ಹೆಸರುಗಳು ಟಿವಿಕೆ ಪಕ್ಷದ ಮುಂದಿದೆ. ಇದು ವಿಜಯ್ ಚೊಚ್ಚಲ ಚುನಾವಣೆ ಆದ್ದರಿಂದ ಅವರ ಹೆಸರಿಗೆ ಸರಿ ಹೊಂದುವಂತೆ ‘ವಿ’ ಅಕ್ಷರದಿಂದ ಪ್ರಾರಂಭವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆಯನ್ನು ನೀಡಲಾಗಿದೆ.
‘ವಿಜಯ್’ ‘ವಿ’ ಹೆಸರಿನ ಅಕ್ಷರದ ಕ್ಷೇತ್ರ ಆಯ್ಕೆ ಮಾಡಿಕೊಂಡು ವಿಕ್ಟರಿ ಸಾಧಿಸಬೇಕು ಎಂಬುದು ಚಿಂತನೆಯಾಗಿದೆ. ಆದರೆ ಯಾವ ಕ್ಷೇತ್ರ? ಎಂದು ಇನ್ನೂ ಸಹ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ ವಿಜಯ್. ಚುನಾವಣಾ ಪ್ರಚಾರಕ್ಕೆ ಅಪಾರ ಜನರು ಸೇರುತ್ತಿದ್ದು, ಚುನಾವಣೆಯಲ್ಲಿ ಅವರಿಗೆ ಬೆಂಬಲ ಸಿಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮತ್ತೊಂದು ಕಡೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಯಾರು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಆದ್ದರಿಂದ ನಟ ವಿಜಯ್ ಎರಡೂ ಪಕ್ಷಗಳು ನಮಗೆ ಸಮಾನ ಎದುರಾಳಿಗಳು, ನಾವು ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಯುವ ಸಮೂಹದ ಮತಗಳು ನಟ ವಿಜಯ್ ಪಾಲಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ ರಾಜ್ಯದ ಆಡಳಿತ ಪಕ್ಷ ಡಿಎಂಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಅವರು ವಿಜಯ್‌ಗೆ ಪೈಪೋಟಿ ನೀಡಲಿದ್ದಾರೆ ಎಂದು ಅಂದಾಜಿಸಿದೆ.

