ಪ್ರಸ್ತುತ ನಡೆಯುತ್ತಿರುವ ಟಿ ಟ್ವೆಂಟಿ ವಿಶ್ವಕಪ್ 2026 ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ.
ಫೆಬ್ರವರಿ 7ರಂದು ವಾಂಖೆಡೆಯಲ್ಲಿ ನಡೆದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಸೂರ್ಯಕುಮಾರ್ ಯಾದವ್ 84 ರನ್‌ಗಳ ಸಹಾಯದಿಂದ 161 ರನ್ ಕಲೆಹಾಕಿ 162 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಬೌಲಿಂಗ್‌ನಲ್ಲಿ ಭಾರತವನ್ನು ಕಾಡಿದ್ದ ಅಮೆರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿ 29 ರನ್‌ಗಳ ಅಂತರದಿಂದ ಸೋಲನ್ನು ಕಂಡಿತ್ತು.
ಇನ್ನು ಈ ಪಂದ್ಯ ಆರಂಭಕ್ಕೂ ಹಿಂದಿನ ದಿನ ಭಾರತ ತಂಡದ ಪ್ರಮುಖ ಬೌಲರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ಅಲಭ್ಯರಾದ ಕಾರಣ ಭಾರತ ಆ ಸ್ಥಾನ ತುಂಬಲು ಹುಡುಹಾಟ ನಡೆಸಿತ್ತು. ರಾಣಾ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ತಂಡವನ್ನು ಸೇರಿಕೊಂಡರು.
ಭಾರತದ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ್ದ ಯುಎಸ್‌ಎ ಭಾರತ ನೀಡಿದ್ದ ಗುರಿಯನ್ನು ಬೆನ್ನಟ್ಟುವುದನ್ನು ತಪ್ಪಿಸಿದ ಕೀರ್ತಿ ಸಿರಾಜ್‌ಗೆ ಸಲ್ಲಬೇಕು ಎಂದರೆ ತಪ್ಪಾಗಲಾರದು. ಇನ್ನಿಂಗ್ಸ್‌ನಲ್ಲಿ ಮೊದಲನೇ ವಿಕೆಟ್ ಕಬಳಿಸಿದ ಸಿರಾಜ್ ಇಬ್ಬರು ಆರಂಭಿಕರ ವಿಕೆಟ್‌ಗಳನ್ನು ಪಡೆದುಕೊಂಡರು. ಅಲ್ಲದೇ 160+ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದ ಶುಭಮ್ ರಂಜನೆಯನ್ನು ಸಹ ಸಿರಾಜ್ ಪೆವಿಲಿಯನ್ ಸೇರಿಸಿದರು. ಹೀಗೆ ಮೂರು ವಿಕೆಟ್ ಪಡೆದ ಸಿರಾಜ್ ಕೊನೆಯ ಹಂತದಲ್ಲಿ ತಂಡಕ್ಕೆ ಆಗಮಿಸಿ ಉತ್ತಮ ಪ್ರದರ್ಶನ ನೀಡಿದರು.
ಇನ್ನು ಈ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್ ತಾನು ರಣಜಿ ಮುಗಿಸಿ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಆಡಲು ಬಂದ ಕರೆಯ ಕುರಿತು ಬಿಚ್ಚಿಟ್ಟಿದ್ದಾರೆ.
‘ನಾನು ಇದೇ 15ರಂದು ಇರುವ ರಿಯಲ್ ಮ್ಯಾಡ್ರಿಡ್ ಪಂದ್ಯ ನೋಡುವ ಯೋಜನೆ ಹಾಕಿಕೊಂಡಿದ್ದೆ. ಅದರ ಬಳಿಕ ರಂಜಾನ್ ಇದ್ದು, ಅದರ ಸುತ್ತ ಯೋಜನೆ ಹಾಕಿಕೊಂಡಿದ್ದೆ. ಆದರೆ ದೇವರು ಬರೆದದ್ದು ನಡೆಯುತ್ತಿದೆ’ ಎಂದು ಸಿರಾಜ್ ಟಿ ಟ್ವೆಂಟಿ ವಿಶ್ವಕಪ್‌ಗೆ ಆಯ್ಕೆಯಾದ ಕ್ಷಣವನ್ನು ನೆನೆದಿದ್ದಾರೆ.
‘ದೇವರು ನನ್ನ ಯೋಜನೆಯನ್ನು ಬದಲಿಸಿದರು. ಬಹು ದಿನಗಳ ಬಳಿಕ ನಾನು ನನ್ನ ಕುಟುಂಬದವರ ಜತೆ ಕಾಲ ಕಳೆಯುತ್ತಿದ್ದೆ. ಇದ್ದಕ್ಕಿದ್ದಂತೆ ಸೂರ್ಯ ಭಾಯ್ ಕರೆ ಮಾಡಿ ವಿಶ್ವಕಪ್‌ಗೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ಸಿದ್ಧನಾಗು ಎಂದರು. ಜೋಕ್ ಮಾಡಬೇಡಿ ಎಂದು ಹೇಳಿದೆ. ಸೂರ್ಯ ಭಾಯ್ ಸತ್ಯ ಹೇಳುತ್ತಿದ್ದೇನೆ ಎಂದರು. ಇದೊಂದು ಶಾಕಿಂಗ್ ಸುದ್ದಿಯಾಗಿತ್ತು. ದೇವರು ಇದೆಲ್ಲವನ್ನೂ ಬರೆದಿದ್ದಾರೆ, ಇದನ್ನೂ ಯಾರಿಂದಲೂ ಬದಲಿಸಲಾಗುವುದಿಲ್ಲ, ಇದಕ್ಕಿಂತ ಮಿಗಿಲಾದದ್ದು ಏನೂ ಇಲ್ಲ’ ಎಂದು ಸಿರಾಜ್ ಸೂರ್ಯಕುಮಾರ್ ಯಾದವ್ ಮಾಡಿದ ಕರೆಯ ಕುರಿತು ಮಾತನಾಡಿದರು.

