ಇ-ಸ್ವತ್ತು ತಂತ್ರಾಂಶದ ಕುರಿತು ಹಲವು ಹಲವು ದೂರುಗಳು ಕೇಳಿ ಬರುತ್ತಿದ್ದವು. ಈಗ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಹಾಕಿದ್ದಾರೆ.
ಸಚಿವರ ಪೋಸ್ಟ್ ವಿವರ: ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಅದರಂತೆ ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ. ಹೊಸ ಬಹುಮಹಡಿಗಳಿಗೆ (ಅಪಾರ್ಟ್‌ಮೆಂಟ್) ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ಕಲ್ಪಿಸಿಕೊಡುವ ಮೂಲಕ ತ್ವರಿತ ಸೇವೆಗೆ ಅವಕಾಶ ಒದಗಿಸಲಾಗಿದೆ.
ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ (Citizen Interface) ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಗುಂಟೆ ಮತ್ತು ಸೆಂಟ್ಸ್‌ನಲ್ಲಿರುವ ವಿಸ್ತೀರ್ಣವನ್ನು ಚ.ಮೀನಲ್ಲಿ ಪರಿವರ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮತ್ತು ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ 10 ದಿನದೊಳಗೆ ಬಗೆಹರಿಸಲಾಗುವುದು.
ಅರ್ಜಿಗಳ ವಿವರ: ಸಚಿವರ ಪೋಸ್ಟ್ ಪ್ರಕಾರ ಇ-ಸ್ವತ್ತು 2.0 ತಂತ್ರಾಂಶದಡಿ ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,16,296 ಅರ್ಜಿಗಳು ಸ್ವೀಕೃತವಾಗಿವೆ. ಪ್ರಸ್ತುತ, 4,705 ಅರ್ಜಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಲಾಗಿನ್‌ನಲ್ಲಿ, 12,378 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ನಲ್ಲಿ, 3,069 ಅರ್ಜಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರ ಲಾಗಿನ್‌ನಲ್ಲಿ ಹಾಗೂ 883 ಅರ್ಜಿಗಳು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಲಾಗಿನ್‌ನಲ್ಲಿ ಅನುಮೋದನೆಗಾಗಿ ಬಾಕಿ ಇವೆ.
ಈ ರೀತಿ, ವಿವಿಧ ಹಂತಗಳಲ್ಲಿ ಒಟ್ಟು 21,035 ಅರ್ಜಿಗಳು ಅನುಮೋದನೆಗಾಗಿ ಬಾಕಿ ಇವೆ. ಇದುವರೆಗೆ ಇ-ಸ್ವತ್ತು 2.0 ತಂತ್ರಾಂಶದಡಿ ಒಟ್ಟು 95,261 ಅರ್ಜಿಗಳು ಅನುಮೋದನೆಗೊಂಡು ವಿಲೇವಾರಿ ಮಾಡಲಾಗಿದೆ.
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಮತ್ತು ಬಳಕೆದಾರರು ಅರ್ಜಿಗಳನ್ನು ಅನುಮೋದನೆ ಮಾಡುವಂತಹ ಸಂದರ್ಭದಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದಿದೆ.
ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ಎನ್.ಐ.ಸಿ ತಂತ್ರಾಂಶದಲ್ಲಿನ ತೊಡಕುಗಳಿಂದ ಇ-ಸ್ವತ್ತು ಮಂಜಾರಾತಿಯಲ್ಲಿ ವಿಳಂಬವಾಗುತ್ತಿದ್ದು, ಈಗಾಗಲೇ ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರಿಗೆ ಪತ್ರ ಬರೆದು, ಇ-ಸ್ವತ್ತು 2.0 ತಂತ್ರಾಂಶದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಉಳಿದ ಮಾಡ್ಯುಲ್‌ಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ಕೋರಲಾಗಿದೆ.
ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ. ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಮಸ್ಯೆ ಹಾಗೂ ಸಂದೇಹಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು.
ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿ ಸಂಖ್ಯೆ 9483476000 ಪ್ರಾರಂಭಿಸಲಾಗಿದೆ. ಇ-ಸ್ವತ್ತು 2.0 ರಡಿ ಅರ್ಜಿ ಸಲ್ಲಿಸಲು, ಸಂಬಂಧಿತ ದಾಖಲಾತಿ/ ಪ್ರಕ್ರಿಯೆಯಲ್ಲಿ/ ತಂತ್ರಾಂಶದ ಬಳಕೆಯ ಕುರಿತು ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲೆಗಳ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.
ಜಿಲ್ಲಾ ಸಹಾಯವಾಣಿ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

