ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ಘಟನೆಯಲ್ಲಿ 69 ಜನರ ಸಾವನ್ನಪ್ಪಿದ್ದು, 169 ಜನರಿಗೆ ಗಾಯವಾಗಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಗಳ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ಶಿಯಾ ಆರಾಧನಾ ಮಂದಿರದ ಮುಖ್ಯ ದ್ವಾರದ ಬಳಿ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ.
ಈ ಸ್ಪೋಟದ ಬಳಿಕ ಇಸ್ಲಾಮಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ನಗರದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಮಸೀದಿ ಒಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕನಿಷ್ಠ 69 ಜನರು ಸಾವನ್ನಪ್ಪಿದ್ದಾರೆ ಮತ್ತು 169 ಜನರು ಗಾಯಗೊಂಡಿದ್ದಾರೆ. ಈ ಸ್ಫೋಟವು ನಗರದ ಶೆಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲೈ ಇಮಾಂಬರ್ ಗಾದಲ್ಲಿ ಸಂಭವಿಸಿದೆ. ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಆರಾಧನಾ ಮಂದಿರದ ಮುಖ್ಯ ದ್ವಾರದಲ್ಲಿ ಈ ದುರ್ಘಟನೆ ನಡೆದಿದೆ.
ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ‘ದ ಟೈಮ್ಸ್ ಆಫ್ ಇಸ್ಲಾಮಾಬಾದ್’ ವರದಿ ಮಾಡಿರುವಂತೆ, ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ದಾಳಿಕೋರನನ್ನು ತಡೆದಿದ್ದಾರೆ. ಇದರಿಂದಾಗಿ ಆತ ಪ್ರಾರ್ಥನೆಗಾಗಿ ಭಕ್ತರು ಸೇರಿದ್ದ ಮುಖ್ಯ ಸಭಾಂಗಣದ ಒಳಗೆ ಪ್ರವೇಶಿಸುವುದು ತಪ್ಪಿದೆ.
ಭದ್ರತಾ ಸಿಬ್ಬಂದಿ ತಡೆದ ಹೊರತಾಗಿಯೂ ಆತ ಒಳನುಗ್ಗಿದ್ದಾನೆ. ಸ್ಫೋಟದ ಸ್ಥಳದ ವಿಡಿಯೋ ತುಣುಕುಗಳು ಗೇಟ್ನ ರಚನೆಗೆ ಭಾರಿ ಹಾನಿಯಾಗಿರುವುದನ್ನು ಮತ್ತು ಹತ್ತಿರದ ಕಟ್ಟಡಗಳ ಕಿಟಕಿಗಳು ಪುಡಿಪುಡಿಯಾಗಿರುವುದನ್ನು ತೋರಿಸುತ್ತಿವೆ.
ಸ್ಫೋಟದ ತೀವ್ರತೆಗೆ ರಸ್ತೆಯುದ್ದಕ್ಕೂ ಅವಶೇಷಗಳು ಹರಡಿಕೊಂಡಿದ್ದವು. ವಿಡಿಯೋಗಳಲ್ಲಿ ಮೃತದೇಹಗಳು ಕಂಡುಬಂದಿದ್ದು, ಅವುಗಳಲ್ಲಿ ಕೆಲವರ ದೇಹದ ಅಂಗಾಂಗಗಳು ಸ್ಫೋಟದ ರಭಸಕ್ಕೆ ಛಿದ್ರ ಛಿದ್ರವಾಗಿವೆ.
ಟಾರ್ಗೆಟ್ ಇಸ್ಲಾಮಾಬಾದ್: ಹೌದು ಪಾಕಿಸ್ತಾನದ ಇಸ್ಲಾಮಾಬಾದ್ ಪದೇ ಪದೇ ಟಾರ್ಗೆಟ್ ಆಗುತ್ತಿದೆ. ನವೆಂಬರ್ 11, 2025 ರಂದು ಇಸ್ಲಾಮಾಬಾದ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡದ ಹೊರಗೆ ನಡೆದ ಆತ್ಮಾಹುತಿ ಸ್ಫೋಟದ ನಂತರ, ಅಂದರೆ ಸುಮಾರು ಮೂರು ತಿಂಗಳ ಅವಧಿಯಲ್ಲೇ ಈ ಘಟನೆ ನಡೆದಿದೆ. ಅಂದಿನ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದರು ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇಂದಿನ ಸ್ಫೋಟದ ನಂತರ ಇಸ್ಲಾಮಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ನಗರದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಹೆಚ್ಚಿನ ಸಾವುನೋವುಗಳ ಭೀತಿಯ ನಡುವೆ ರಕ್ಷಣಾ ಮತ್ತು ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ‘ದ ಟೈಮ್ಸ್ ಆಫ್ ಇಸ್ಲಾಮಾಬಾದ್’ ವರದಿ ಮಾಡಿದೆ. ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕಿನಿಕ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ಪ್ರಧಾನಿ ಪ್ರತಿಕ್ರಿಯೆ: ಇಸ್ಲಾಮಾಬಾದ್ನ ಶಿಯಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದರು. ಈ ಭೀಕರ ಘಟನೆಯಲ್ಲಿ ಕನಿಷ್ಠ 69 ಜನರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಸ್ಫೋಟದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಮತ್ತು ಕನಿಷ್ಠ 80 ಜನರನ್ನು ಗಾಯಗೊಳಿಸಿದ ಈ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.

