ವಡೋದರಾದ ಕೋಟಂಬಿ ಬಿಸಿಎ ಕ್ರೀಡಾಂಗಣದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯ ಇಂದು ( ಫೆಬ್ರವರಿ 5 ) ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್ಗಳ ಗುರಿಯನ್ನು ನೀಡಿದೆ. ಇದು ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ದಾಖಲಾದ 200+ ರನ್ ಮೊತ್ತವಾಗಿದೆ. ಆರ್ಸಿಬಿ ಇದನ್ನು ಚೇಸ್ ಮಾಡಿದರೆ ಸಾರ್ವಕಾಲಿಕ ದಾಖಲೆಯಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 49 ರನ್ ಜತೆಯಾಟವಾಡಿದರು. ಲಿಜೆಲ್ ಲೀ 37 ರನ್ ಗಳಿಸಿದರೆ, ಶಫಾಲಿ ವರ್ಮಾ 20 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 57 ರನ್ ಬಾರಿಸಿದರೆ, ಅಂತಿಮ 19ನೇ ಓವರ್ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಶಿನೆಲ್ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. 25 ಎಸೆತಗಳಲ್ಲಿ 44 ರನ್ ಚಚ್ಚಿದ ಲೌರಾ ವಾಲ್ವಾರ್ಟ್ ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನ್ಔಟ್ ಆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಯಾಲಿ ಸಟ್ಘರೆ, ಅರುಂಧತಿ ರೆಡ್ಡಿ ಹಾಗೂ ನಡೈನ್ ಡಿ ಕ್ಲರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

