ಸಿನಿಮೀಯ ಮಾದರಿಯಲ್ಲಿ ಪತಿಯನ್ನೇ ಹತ್ಯೆ ಮಾಡುತ್ತಿರುವ ಪ್ರಕರಣಗಳು ಸಮಾಜದಲ್ಲಿ ನೈತಿಕತೆಯ ಅಧಃಪತನಕ್ಕೆ ಹಿಡಿದ ಕನ್ನಡಿಯಂತಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ‘ಹನಿಮೂನ್ ಮರ್ಡರ್’ ಅಥವಾ ವಿವಾಹೇತರ ಸಂಬಂಧಕ್ಕಾಗಿ ಸಂಗಾತಿಯನ್ನೇ ಕೊಲ್ಲುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.
ಇದೀಗ ರಾಜಸ್ಥಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ಅವರು ತಂಗಾಳಿಯಲ್ಲಿ ವಾಯುವಿಹಾರಕ್ಕೆ ಹೋದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರ ಚಿನ್ನಾಭರಣಗಳನ್ನು ದೋಚಲಾಗಿತ್ತು.
ಆರಂಭದಲ್ಲಿ ಇದು ‘ಹಿಟ್ ಅಂಡ್ ರನ್’ (ಡಿಕ್ಕಿ ಹೊಡೆದು ಪರಾರಿಯಾಗುವುದು) ಪ್ರಕರಣದಂತೆ ಕಂಡರೂ, ತನಿಖಾಧಿಕಾರಿಗಳಿಗೆ ಮೇಘಾಲಯದ ‘ಹನಿಮೂನ್ ಮರ್ಡರ್’ ಪ್ರಕರಣದ ನೆನಪಾದಾಗ ಪ್ರಕರಣವು ದಿಢೀರ್ ತಿರುವು ಪಡೆದುಕೊಂಡಿತು. ಅಲ್ಲಿ ಸೋನಮ್ ರಘುವಂಶಿ ಎಂಬ ಮಹಿಳೆ ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ ಸಮಯದಲ್ಲಿ ಕೊಲೆ ಮಾಡಿಸಿ, ಅದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು.
ಪೊಲೀಸ್ ತನಿಖೆಯ ಪ್ರಕಾರ, ಅಂಜು ತನ್ನ ಪ್ರಿಯಕರ ಸಂಜು ಎಂಬುವವನ ಸಹಾಯದಿಂದ ಪತಿಯನ್ನು ಕೊಲೆ ಮಾಡಿಸಿದ್ದಳು. ನಂತರ ಈ ಜೋಡಿಯು ಇದನ್ನು ಅಪಘಾತ ಎಂದು ತೋರಿಸಲು ಸಂಚು ರೂಪಿಸಿತ್ತು ಎಂದು ವರದಿಯಾಗಿದೆ.
ಘಟನೆ ನಡೆದಿದ್ದು ಹೇಗೆ?
ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಅವರ ಪ್ರಕಾರ, ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ರಸ್ತೆಯಲ್ಲಿ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಲಾಗಿತ್ತು. ನಂತರ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
“ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತ್ತು. ನಾವು ಅಪಘಾತದ ಸ್ಥಳವನ್ನು ಪರಿಶೀಲಿಸಿದೆವು ಮತ್ತು ತಾಂತ್ರಿಕ ತನಿಖೆಗಾಗಿ ಎಫ್ಎಸ್ಎಲ್ (FSL) ತಂಡವನ್ನೂ ಕರೆಸಿದೆವು,” ಎಂದು ದುಹಾನ್ ತಿಳಿಸಿದ್ದಾರೆ.
23 ವರ್ಷದ ಅಂಜು ಪೊಲೀಸರಿಗೆ ತಿಳಿಸಿದಂತೆ, ತಾನು ಮತ್ತು ಪತಿ ಸಂಜೆ ವಾಯುವಿಹಾರದಲ್ಲಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಅಲ್ಲದೆ, ತಾನು ಧರಿಸಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿದೆ ಎಂದು ಅವಳು ಹೇಳಿಕೊಂಡಿದ್ದಳು.
ಆದರೆ, ಸ್ಥಳದಲ್ಲಿದ್ದ ವಾಸ್ತವ ಸ್ಥಿತಿ ಮತ್ತು ಅಂಜು ನೀಡಿದ ಹೇಳಿಕೆಗಳ ನಡುವಿನ ವ್ಯತ್ಯಾಸವು ಪೊಲೀಸರಲ್ಲಿ ಅನುಮಾನ ಮೂಡಿಸಿತು. ಆಶಿಶ್ ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದವು ಮತ್ತು ಅವರನ್ನು ಉಸಿರುಗಟ್ಟಿಸಿ ಕೊಂದಿರುವಂತೆ ಕಂಡುಬಂದಿತ್ತು. ಮತ್ತೊಂದೆಡೆ, ಅಂಜು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಆಕೆಯ ಫೋನ್ ಪರಿಶೀಲಿಸಿದಾಗ, ಮನೆಯ ಹತ್ತಿರವೇ ವಾಸವಿದ್ದ ಸಂಜು ಎಂಬುವವನೊಂದಿಗೆ ಆಕೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಯಿತು.
ಹನಿಮೂನ್ ಮರ್ಡರ್ 2.0
ಅಂಜು ಮತ್ತು ಆಶಿಶ್ ಅವರ ವಿವಾಹವಾಗಿ ಕೇವಲ ಮೂರು ತಿಂಗಳಾಗಿತ್ತು. ಆದರೆ ಅಂಜು ಈ ಮದುವೆಯಿಂದ ಅತೃಪ್ತಳಾಗಿದ್ದಳು ಮತ್ತು ತನ್ನ ತವರಿಗೆ ಮರಳಿದ್ದಳು. ಅಲ್ಲಿ ಅವಳು ತನ್ನ ಮಾಜಿ ಪ್ರಿಯಕರ ಸಂಜುವಿನೊಂದಿಗೆ ಸಂಪರ್ಕ ಬೆಳೆಸಿದ್ದಳು. ಅಂಜು ತವರಿನಲ್ಲಿದ್ದಾಗಲೇ ಇಬ್ಬರೂ ಸೇರಿ ಆಶಿಶ್ನ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಯೋಜನೆಯಂತೆ ಅಂಜು ತನ್ನ ಪತಿಯನ್ನು ವಾಯುವಿಹಾರಕ್ಕೆ ಕರೆಯೊಯ್ದು ನಿರ್ಜನ ರಸ್ತೆಗೆ ಕರೆತಂದಿದ್ದಳು. ಸಂಜು ಮತ್ತು ಅವನ ಸಹಚರರಾದ ರಾಕಿ, ಬಾದಲ್ ಮತ್ತು ಸಿದ್ಧಾರ್ಥ್ ಪೊದೆಗಳ ಹಿಂದೆ ಅವಿತಿದ್ದರು. ಪೊಲೀಸರ ಪ್ರಕಾರ, ಅವರು ಆಶಿಶ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದಿದ್ದರು ಮತ್ತು ನಂತರ ಅದನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಈ ನಡುವೆ, ದರೋಡೆ ನಡೆದಂತೆ ನಾಟಕವಾಡಲು ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಅವರಿಗೆ ನೀಡಿದ್ದಳು. ಬಳಿಕ ಆಕೆ ರಸ್ತೆಯಲ್ಲಿ ಪ್ರಜ್ಞಾಹೀನಳಾದಂತೆ ನಟಿಸಿದ್ದಳು, ಆದರೆ ಆಶಿಶ್ ಕುತ್ತಿಗೆಯ ಮೇಲಿದ್ದ ಗಾಯದ ಗುರುತುಗಳು ಅಸಲಿ ಕಥೆಯನ್ನು ಬಯಲು ಮಾಡಿದವು.

