ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಜಮಲಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳಿಗೆ ಎಂದಿನಂತೆ ಮಂಗಳವಾರ ಮಧ್ಯಾಹ್ನ ಬಿಸಿಯೂಟ ನೀಡಲಾಗಿದೆ. ಊಟ ಸೇವಿಸಿದ ನಂತರ ಕೆಲವು ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮಕ್ಕಳನ್ನು ಗಮನಿಸಿದ ಶಿಕ್ಷಕರು ಹಾಗೂ ಪೋಷಕರು ಕೂಡಲೇ ಅವರ ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮಕ್ಕಳಿಗೆ ನೀಡಿದ್ದ ಅನ್ನದಲ್ಲಿ ಹುಳಗಳು ಪತ್ತೆಯಾಗಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ.
ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಮಕ್ಕಳು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

