ಬೆಂಗಳೂರು : ಕೇರಳ ಮಾದರಿಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದೆ.
ಹೌದು.ನೆರೆ ರಾಜ್ಯ ಕೇರಳದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿರುವ ಮಾದರಿಯಲ್ಲೇ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೂ ಅಪಘಾತ ಮತ್ತು ಜೀವ ವಿಮೆ (Accident and Life Insurance) ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕದ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲು ಕೋರಿ ರಾಜ್ಯ ಸರ್ಕಾರಕ್ಕೆ ಮಕ್ಕಳ ಆಯೋಗ ಪತ್ರ ಬರೆದಿದೆ.
ಏನಿದೆ ಪತ್ರದಲ್ಲಿ..?
ಮಕ್ಕಳ ಜೀವ, ಭದ್ರತೆ ಮತ್ತು ಗೌರವವನ್ನು ರಕ್ಷಿಸುವುದು ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಮೂಲ ಕರ್ತವ್ಯವಾಗಿದೆ. ಭಾರತ ಸಂವಿಧಾನದ ಅನುಚ್ಛೇದ 21 ಮಕ್ಕಳಿಗೆ ಜೀವಿಸುವ ಹಕ್ಕನ್ನು ಖಚಿತಪಡಿಸಿದರೆ, ಅನುಚ್ಛೇದ 214 ಶಿಕ್ಷಣದ ಹಕ್ಕನ್ನು ನೀಡುತ್ತದೆ. ಆದರೆ ಈ ಹಕ್ಕುಗಳು ಅರ್ಥಪೂರ್ಣವಾಗಬೇಕಾದರೆ, ಮಕ್ಕಳು ಭಯವಿಲ್ಲದೆ, ಅಪಾಯರಹಿತ ವಾತಾವರಣದಲ್ಲಿ ಕಲಿಯುವಂತೆ ಮಾಡುವ ಜವಾಬ್ದಾರಿಯು ಸರ್ಕಾರದ ಮೇಲಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕದ ಅನೇಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸಂಭವಿಸಿದ ದುರ್ಘಟನೆಗಳು (ಬಿಸಿಯೂಟದ ಪಾತ್ರೆಗಳಿಗೆ ಬಿದ್ದು ಗಾಯ, ಶಾಲಾ ಪ್ರವಾಸ ಮತ್ತು ಕ್ರೀಡಾಕೂಟಗಳಲ್ಲಿ ಅಪಘಾತಗಳು, ವಿದ್ಯುತ್ ಅವಘಡಗಳು, ಕಟ್ಟಡ ಮತ್ತು ಮೂಲಸೌಕರ್ಯ ವೈಫಲ್ಯಗಳು) ಅತ್ಯಂತ ಗಂಭೀರ ಆತಂಕಕ್ಕೆ ಕಾರಣವಾಗಿವೆ. ಇವುಗಳಲ್ಲಿ ಕೆಲವು ಪ್ರಕರಣಗಳು ಮಕ್ಕಳ ಸಾವಿನಲ್ಲಿಯೇ ಅಂತ್ಯಗೊಂಡಿವೆ. ಇಂತಹ ಅನೇಕ ಘಟನೆಗಳಿಗೆ ಸಂಬಂಧಿಸಿದ ದೂರುಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಂದೆಯೂ ದಾಖಲಾಗಿವೆ.
Right of Children to Free and Compulsory Education Act, 2009 (RTE Act) ಶಾಲಾ ಮಕ್ಕಳಿಗೆ ಸುರಕ್ಷಿತ ಮತ್ತು ಮಕ್ಕಳ ಸ್ನೇಹಿ ವಾತಾವರಣ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ໖. Juvenile Justice (Care and Protection of Children) Act, 2015 2 National Policy for Children ರಕ್ಷಣೆಯನ್ನು ಸರ್ಕಾರದ ಪ್ರಧಾನ ಕರ್ತವ್ಯವೆಂದು ಘೋಷಿಸುತ್ತವೆ.
ಶಾಲೆಗಳಲ್ಲಿ ಅಥವಾ ಶಾಲಾ ಚಟುವಟಿಕೆಗಳಲ್ಲಿನ ದುರ್ಘಟನೆಗಳು ಸಂಭವಿಸಿದಾಗ ಮಕ್ಕಳಿಗೆ ಕೇವಲ “ಜೀವ ವಿಮೆ” ಇದ್ದರೆ ಸಾಲದು; ಏಕೆಂದರೆ ಜೀವ ವಿಮೆ ಮರಣದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡುತ್ತದೆ. ಆದರೆ ಶಾಲಾ ಅವಘಡಗಳಲ್ಲಿ ಬಹುಪಾಲು ಮಕ್ಕಳು ಗಾಯಗೊಂಡು, ಶಾಶ್ವತ ಅಂಗವೈಕಲ್ಯಕ್ಕೊಳಗಾಗಿ ಅಥವಾ ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುವ ಸ್ಥಿತಿಗೆ ತಲುಪುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತ ವಿಮೆ ಮಾತ್ರ ಚಿಕಿತ್ಸೆ ವೆಚ್ಚ, ಅಂಗವೈಕಲ್ಯ ಪರಿಹಾರ ಮತ್ತು ತುರ್ತು ನೆರವನ್ನು ಒದಗಿಸಬಲ್ಲದು. ಆದ್ದರಿಂದ, ಮಕ್ಕಳ ರಕ್ಷಣೆಗೆ ಅಪಘಾತ ವಿಮೆ ಮತ್ತು ಜೀವ ವಿಮೆ ಎರಡೂ ಅನಿವಾರ್ಯ.
ಈ ಸಂದರ್ಭದಲ್ಲಿ, ಕೇರಳ ರಾಜ್ಯ ಸರ್ಕಾರವು 2026-27ರ ಬಜೆಟ್ನಲ್ಲಿ ಶಾಲಾ ಮಕ್ಕಳಿಗೆ ಅಪಘಾತ ಮತ್ತು ಜೀವ ವಿಮೆ (Accident & Life Insurance) ಯೋಜನೆಯನ್ನು ಜಾರಿಗೆ ತಂದಿರುವುದು ಮಕ್ಕಳ ರಕ್ಷಣೆಯಲ್ಲಿ ಮಾದರಿಯಾಗುವಂತಹ ಕ್ರಮವಾಗಿದೆ. ಈ ಯೋಜನೆಯು ಯಾವುದೇ ಶಾಲಾ ಚಟುವಟಿಕೆಯಲ್ಲಿ ಸಂಭವಿಸುವ ಅಪಘಾತದಿಂದ ಗಾಯಗೊಂಡ ಅಥವಾ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಕ್ಷಣ ಆರ್ಥಿಕ ರಕ್ಷಣೆ ಒದಗಿಸುತ್ತದೆ.ಕೇರಳದ ಮಾದರಿಯನ್ನು ಆಧರಿಸಿ. ಕರ್ನಾಟಕದಲ್ಲೂ ಕೆಳಗಿನಂತೆ ಸಮಗ್ರ “ಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳ ಅಪಘಾತ ಮತ್ತು ಜೀವ ವಿಮೆ ಯೋಜನೆ”ಜಾರಿಗೆ ತರಬೇಕೆಂದು ತಮ್ಮನ್ನು ಕೋರುತ್ತ ಈ ಕೆಳಗಿನ ಶಿಫಾರಸ್ಸುಗಳನ್ನು ಗೌರವಪೂರ್ವಕವಾಗಿ ಸಲ್ಲಿಸುತ್ತಿದ್ದೇನೆ.
ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ಒಳಗೊಂಡಿರಬೇಕು.ನೇ ತರಗತಿಯಿಂದ ಪಿಯುಸಿ ದ್ವಿತೀಯ ವರ್ಷದವರೆಗೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು ಸ್ವಯಂಚಾಲಿತವಾಗಿ ಒಳಗೊಳ್ಳಬೇಕು.
ವಿಮೆ ಒಳಗೊಂಡಿರಬೇಕಾದ ಅಪಾಯಗಳು
ಶಾಲಾ ಅವರಣ, ಬಿಸಿಯೂಟ ಸಂಬಂಧಿತ, ಪ್ರಯೋಗಾಲಯ, ಆಟದ ಮೈದಾನ, ಶಾಲಾ ಪ್ರವಾಸ, ಕ್ರೀಡಾಕೂಟ, ಸಾರಿಗೆ ವೇಳೆ ಇನ್ನಿತರೆ ಸಂಭವಿಸುವ ಎಲ್ಲ ಅಪಘಾತಗಳು.ಗಾಯ, ಶಾಶ್ವತ ಅಂಗವೈಕಲ್ಯ ಮತ್ತು ಸಾವಿನ ಸಂದರ್ಭಗಳಲ್ಲಿ ಪರಿಹಾರ.
ಪರಿಹಾರದ ಸ್ವರೂಪ:
ಗಂಭೀರ ಗಾಯಗಳಿಗೆ ಚಿಕಿತ್ಸೆ ವೆಚ್ಚ.
ಶಾಶ್ವತ ಅಂಗವೈಕಲ್ಯಕ್ಕೆ ನಿಗದಿತ ಪರಿಹಾರ ಮೊತ್ತ.
ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ತಕ್ಷಣ ಪರಿಹಾರ (lump sum).
ಅನುಷ್ಠಾನ ವ್ಯವಸ್ಥೆ:
ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಮಾ ಸಂಸ್ಥೆ/ಸಾರ್ವಜನಿಕ ವಿಮಾ ಕಂಪನಿಗಳ ಮೂಲಕ ಗುಂಪು 2 (Group Insurance) .
ಪ್ರತಿ ವಿದ್ಯಾರ್ಥಿಗೆ ಸರ್ಕಾರವೇ ಪ್ರೀಮಿಯಂ ಪಾವತಿಸಬೇಕು.
ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಸರಳ ಕೈಮ್ ವ್ಯವಸ್ಥೆ ಹಾಗೂ ಸಮಯಮಿತಿಯೊಳಗಿನ ಪರಿಹಾರ.
ಪಾರದರ್ಶಕತೆ ಮತ್ತು ಜವಾಬ್ದಾರಿ:
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಯೋಜನೆಯ ವಿವರಗಳನ್ನು ಪ್ರಕಟಿಸುವುದು.
ಜಿಲ್ಲಾಮಟ್ಟದಲ್ಲಿ ಮೇಲ್ವಿಚಾರಣೆ.
ಮಕ್ಕಳ ಜೀವ ಮತ್ತು ಭದ್ರತೆಯನ್ನು ಅಪಘಾತದ ಬಳಿಕ ಕೇವಲ ಸಹಾನುಭೂತಿಯಿಂದ ನೋಡುವುದಕ್ಕಿಂತ, ಅಪಘಾತದ ಆರ್ಥಿಕ ಪರಿಣಾಮಗಳಿಂದ ಅವರನ್ನು ಮುಂಚಿತವಾಗಿಯೇ ರಕ್ಷಿಸುವ ವ್ಯವಸ್ಥೆ ನಿರ್ಮಿಸುವುದು ನೈಜವಾದ ಮಕ್ಕಳ ಪರ ಆಡಳಿತವಾಗಿದೆ. ಆದ್ದರಿಂದ, ಕೇರಳ ಮಾದರಿಯನ್ನು ಆಧಾರವಾಗಿ ತೆಗೆದುಕೊಂಡು, ಕರ್ನಾಟಕದಲ್ಲೂ ಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ ವಿಮೆ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪರವಾಗಿ ಗೌರವಪೂರ್ವಕವಾಗಿ ಕೋರುತ್ತೇನೆ.ಈ ರಾಜ್ಯದ ಮಕ್ಕಳ ಪರವಾಗಿ ತಾವು ಕೈಗೊಳ್ಳುವ ಈ ಮಹತ್ವದ ಕ್ರಮವು ಸಾವಿರಾರು ಕುಟುಂಬಗಳಿಗೆ ಭದ್ರತೆ ನೀಡುವುದಲ್ಲದೆ, ಶಿಕ್ಷಣ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನೂ ಬಲಪಡಿಸುವುದೆಂದು ಆಶಿಸುತ್ತೇನೆ ಎಂದು ಡಾ. ತಿಪ್ಪೇಸ್ವಾಮಿ ಕೆ.ಟಿ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.




