ಕೇಂದ್ರ ಬಜೆಟ್ ಮಂಡನೆ ಭಾನುವಾರ ನಡೆಯುತ್ತಿದೆ. ಸಂಪ್ರದಾಯದಂತೆ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಾಗುತ್ತದೆ. ಆದರೆ ಈ ಬಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಆದರೆ 2026-27ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಭಾನುವಾರ ಮಂಡನೆ ಮಾಡುತ್ತಿರುವುದು ತಮ್ಮ ದಾಖಲೆಯ 9ನೇ ಬಜೆಟ್ ಆಗಿದೆ. ಬಜೆಟ್ ಮಂಡನೆ ಕಾರಣ ಭಾನುವಾರ ಷೇರು ಮಾರುಕಟ್ಟೆ ಬಾಗಿಲಿ ತೆರೆದಿದೆ. ಸಾಮಾನ್ಯವಾಗಿ ಶನಿವಾರ, ಭಾನುವಾರ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ.
ಆದರೆ ಕೇಂದ್ರ ಬಜೆಟ್ ಕಾರಣಕ್ಕೆ NSE ಮತ್ತು BSE ಭಾನುವಾರ ಬಾಗಿಲು ತೆರೆದು, ಟ್ರೆಡ್ ನಡೆಸಲಿವೆ. ಬಜೆಟ್ ಷೇರು ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರಲಿದೆ?. ಹೂಡಿಕೆದಾರರಿಗೆ ಸಿಹಿಸುದ್ದಿ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಆರ್ಥಿಕ ಬೆಳವಣಿಗೆ ಮೇಲಿನ ಸರ್ಕಾರದ ನೀತಿಗಳು, ಸರ್ಕಾರದ ಬಂಡವಾಳ ವೆಚ್ಚ ಮತ್ತು ಅಮೆರಿಕದ ಸುಂಕಗಳಿಂದ ಪ್ರಭಾವಿತವಾಗಿರುವ ರಫ್ತು ಆಧಾರಿತ ವಲಯಗಳಿಗೆ ಸಿಗುವ ಬೆಂಬಲವನ್ನು ಹೂಡಿಕೆದಾರರು ಗಮನಿಸುತ್ತಿದ್ದಾರೆ.
ದೇಶೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಆರಂಭಿಸಲು ಸಜ್ಜಾಗಿವೆ. ಶುಕ್ರವಾರದಂದು ಗಿಫ್ಟ್ ನಿಫ್ಟಿ ಫ್ಯೂಚರ್ಸ್ 25,443 ಕ್ಕೆ ಮುಕ್ತಾಯಗೊಂಡಿದ್ದು, ಎನ್ಎಸ್ಇ ನಿಫ್ಟಿ 50 ತನ್ನ ಹಿಂದಿನ ಮುಕ್ತಾಯದ ಮಟ್ಟವಾದ 25,320.65 ಕ್ಕಿಂತ ಅಧಿಕ ಮಟ್ಟದಲ್ಲಿ ಆರಂಭವಾಗುವ ಸಾಧ್ಯತೆಯನ್ನು ಸೂಚಿಸುತ್ತಿದೆ.
ಷೇರು ಮಾರುಕಟ್ಟೆ ಇಂದು ಬಾಗಿಲು ತೆರೆಯಲಿದೆ. ಆದರೆ ಸಾಲದ ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ಇಂದು ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಎರಡು ಸಹ ಇಂದು ಪೂರ್ಣ ಪ್ರಮಾಣದ ವಹಿವಾಟು ನಡೆಸುತ್ತಿವೆ. ಸ್ವಾತಂತ್ರ್ಯದ ನಂತರ ಇಕ್ವಿಟಿ ಮಾರುಕಟ್ಟೆಗಳು ಭಾನುವಾರದಂದು ತೆರೆದಿರುವುದು ಇದು 2ನೇ ಬಾರಿಯಾಗಿದೆ. ಇದಕ್ಕೂ ಮೊದಲು 2025ರ ಬಜೆಟ್ ಸಂದರ್ಭದಲ್ಲಿ ಶನಿವಾರದಂದು ಮಾರುಕಟ್ಟೆಗಳನ್ನು ತೆರೆಯಲಾಗಿತ್ತು.
ಭಾನುವಾರ ಷೇರು ಮಾರುಕಟ್ಟೆ ತೆರೆದಿರುವುದು ಇತಿಹಾಸದಲ್ಲಿ ಬಹಳ ಅಪರೂಪ. ಈ ಹಿಂದೆ 1999ರ ಫೆಬ್ರವರಿ 28ರಂದು (ಭಾನುವಾರ) ಬಜೆಟ್ ಮಂಡನೆಯಾದಾಗ ಮಾರುಕಟ್ಟೆ ತೆರೆಯಲಾಗಿತ್ತು. ಷೇರು ಮಾರುಕಟ್ಟೆ ಎಂದಿನಂತೆ ಬೆಳಗ್ಗೆ 9:15 ರಿಂದ ಸಂಜೆ 3:30 ರವರೆಗೆ ವಹಿವಾಟು ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣವನ್ನು ಬೆಳಗ್ಗೆ 11 ಗಂಟೆಗೆ ಸಂಸತ್ನಲ್ಲಿ ಆರಂಭಿಸಲಿದ್ದಾರೆ. ಹಣಕಾಸು ಸಚಿವರ ಘೋಷಣೆಗಳ ಸಮಯದಲ್ಲಿ ಮಾರುಕಟ್ಟೆಗಳು ಸಕ್ರಿಯವಾಗಿ ಕಾರ್ಯ ನಿರ್ವಹಣೆ ಮಾಡಲಿವೆ.
ಇದು ತೆರಿಗೆ ಪದ್ಧತಿ, ಸರ್ಕಾರದ ವೆಚ್ಚ ಮತ್ತು ವಿವಿಧ ವಲಯಗಳಿಗೆ ಸಂಬಂಧಿಸಿದ ಕ್ರಮಗಳಲ್ಲಿನ ಬದಲಾವಣೆಗಳಿಗೆ ಮಾರುಕಟ್ಟೆಯು ತಕ್ಷಣವೇ ಪ್ರತಿಕ್ರಿಯಿಸಲು ಅವಕಾಶ ನೀಡುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಏರಿಳಿತವನ್ನು ನಿರೀಕ್ಷೆ ಮಾಡಲಾಗಿದೆ. ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸತತ 9ನೇ ಕೇಂದ್ರ ಬಜೆಟ್ ಆಗಿದೆ.

