ಹೈದರಾಬಾದ್: ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವುದು ಹಣ ಗಳಿಸಲು ಉತ್ತಮ ಮಾರ್ಗವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಈ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗಳು ಆತಂಕಕಾರಿಯಾಗಿವೆ. ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ (Instagram/Facebook) “ಸ್ಟಾಕ್ ಮಾರ್ಕೆಟ್ ಟಿಪ್ಸ್” ಎಂಬ ಜಾಹೀರಾತು ನೀಡುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ವಾಟ್ಸಾಪ್ ಅಥವಾ ಟೆಲಿಗ್ರಾಮ್ ಗ್ರೂಪ್ಗಳಿಗೆ ಸೇರಿಸುತ್ತಾರೆ. ಅಲ್ಲಿ ನಕಲಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಸಿ, ಅದರಲ್ಲಿ ಲಕ್ಷಾಂತರ ರೂಪಾಯಿ ಲಾಭ ಬಂದಂತೆ ತೋರಿಸಿ ನಿಮ್ಮನ್ನು ನಂಬಿಸಿ ಮೋಸ ಮಾಡುತ್ತಾರೆ.
ಹೌದು. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ. ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ ಶೇ. 500 ರಷ್ಟು ಲಾಭ ನೀಡುತ್ತೇವೆ ಎಂದು ನಂಬಿಸಿ ಸೈಬರ್ ವಂಚಕರು ಖಮ್ಮಂ ಜಿಲ್ಲೆಯ ಇಂಜಿನಿಯರ್ ಒಬ್ಬರಿಗೆ ₹1.5 ಕೋಟಿಗೂ ಅಧಿಕ ಹಣ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ
ಪುಣೆಯ ಸಿಟಿ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿರುವ 41 ವರ್ಷದ ಇಂಜಿನಿಯರ್ ಈ ವಂಚನೆಗೆ ಬಲಿಯಾದವರು. ಕಳೆದ ವರ್ಷ ನವೆಂಬರ್ನಲ್ಲಿ ಇವರ ಸಹೋದರಿ ಇನ್ಸ್ಟಾಗ್ರಾಮ್ನಲ್ಲಿ ಬಂದ ‘ಸ್ಟಾಕ್ ಮಾರ್ಕೆಟ್ ಹೂಡಿಕೆ’ಗೆ ಸಂಬಂಧಿಸಿದ ಜಾಹೀರಾತನ್ನು ನೋಡಿ ಲಿಂಕ್ ಕ್ಲಿಕ್ ಮಾಡಿದ್ದರು. ತಕ್ಷಣವೇ ಆಕೆಯನ್ನು ‘Z926 one-to-one Service’ ಮತ್ತು ‘L Accel Partners Stock Exchange Group’ ಎಂಬ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಸಲಾಯಿತು.
ಹೂಡಿಕೆ ಮಾಡಿದರೆ ಶೇ. 500 ರಷ್ಟು ಲಾಭ ನೀಡುವುದಾಗಿ ನಂಬಿಸಿದ ವಂಚಕರು, ತಮಗೆ ‘ದೀಕ್ಷಾ ಭಂಡಾರಿ’ ಎಂದು ಪರಿಚಯಿಸಿಕೊಂಡ ಮಹಿಳೆಯ ಮೂಲಕ ಮೊದಲು ₹60,000 ಹೂಡಿಕೆ ಮಾಡುವಂತೆ ಸೂಚಿಸಿದರು. ‘ACEFD’ ಮತ್ತು ‘ACESEC’ ಎಂಬ ನಕಲಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಸಿ, ಅದರಲ್ಲಿ ಹೂಡಿಕೆಯ ವಿವರ ಮತ್ತು ಭಾರಿ ಮೊತ್ತದ ಲಾಭವನ್ನು ತೋರಿಸುತ್ತಿದ್ದರು. ಇದನ್ನು ನಂಬಿದ ಇಂಜಿನಿಯರ್ ಮತ್ತು ಆತನ ಸಹೋದರಿ ನವೆಂಬರ್ 19, 2025 ರಿಂದ ಜನವರಿ 14, 2026 ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದರು.
ಡಿಸೆಂಬರ್ 9 ರಂದು ವಂಚಕರು ನಂಬಿಕೆ ಹುಟ್ಟಿಸಲು ಇಂಜಿನಿಯರ್ ಖಾತೆಗೆ ₹1.5 ಲಕ್ಷ ಜಮೆ ಮಾಡಿದ್ದರು. ಆ್ಯಪ್ನಲ್ಲಿ ಅವರಿಗೆ ₹36 ಕೋಟಿ ಲಾಭ ಬಂದಿರುವುದಾಗಿ ತೋರಿಸಲಾಯಿತು!
ಮೋಸ ಬಯಲಾಗಿದ್ದು ಹೇಗೆ? ಬಂದ ಲಾಭದ ಹಣವನ್ನು ವಿತ್ಡ್ರಾ ಮಾಡಲು ಇಂಜಿನಿಯರ್ ಪ್ರಯತ್ನಿಸಿದಾಗ, ವಂಚಕರು ಸರ್ವಿಸ್ ಚಾರ್ಜ್ ಹೆಸರಿನಲ್ಲಿ ₹36 ಲಕ್ಷ ಮತ್ತು ಆದಾಯ ತೆರಿಗೆ ಹೆಸರಿನಲ್ಲಿ ₹20 ಲಕ್ಷ ಹಣ ಪಾವತಿಸುವಂತೆ ಬೇಡಿಕೆಯಿಟ್ಟರು. ಆಗ ಅನುಮಾನಗೊಂಡ ಸಂತ್ರಸ್ತರು ತಾವು ಮೋಸಹೋಗಿರುವುದನ್ನು ಅರಿತು ತೆಲಂಗಾಣ ಸೈಬರ್ ಸೆಕ್ಯೂರಿಟಿ ಬ್ಯೂರೋಗೆ (TGCSB) ದೂರು ನೀಡಿದ್ದಾರೆ.

