ಮೈಸೂರು: ಮೈಸೂರಿನ ಯಾಂಡಳ್ಳಿ ಬಳಿ ಡ್ರಗ್ಸ್ ತಯಾರಿಕೆಗೆ ಸಿದ್ಧತೆ ನದೆಸಿದ್ದ ಓಡೌನ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಉತ್ತರ ಪ್ರದೇಶ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.
ಗೋಡೌನ್ ಜಪ್ತಿ ಮಾಡಿರುವ ಪೊಲೀಸರು ಅದರಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ತಯಾರಿಕಾ ರಾಸಾಯನಿಕ, ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಮೂಲದ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.
ನಾಲ್ಕು ತಿಂಗಳ ಹಿಂದಷ್ಟೇ ದಂಪತಿ ಇಲ್ಲಿ ಎರಡು ಮನೆ ಹಾಗೂ ಮನೆ ಕೆಳಭಾಗದಲ್ಲಿದ್ದ ಗೋಡೌನ್ ಬಾಡಿಗೆ ಪಡೆದಿದ್ದರು. ಈ ಗೋಡೌನ್ ನಲ್ಲಿ ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ಭಾರಿ ಪ್ರಮಾಣ ಕೆಮಿಕಲ್ಸ್ ಸಂಗ್ರಹಿಸಿದ್ದರು. ಡ್ರಗ್ಸ್ ವ್ಯವಹಾರಕ್ಕಾಗಿಯೇ ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. ದಂಪತಿ ಸ್ಥಳೀಯರೊಂದಿಗೂ ಯಾವುದೇ ಮಾಅತನಡುತ್ತಿರಲಿಲ್ಲ. ಮಾತನಾಡಿಸಿದರೂ ಕೈ ಸನ್ನೆಯಲ್ಲಿಯೇ ಮಾಅತು ಮುಗಿಸುತ್ತಿದ್ದರು ಎನ್ನಲಾಗಿದೆ.
ಆಗಾಗ ತಡರಾತ್ರಿ ಗೋಡೌನ್ ಬಾಗಿಲು ತೆರೆಯುತ್ತಿದ್ದರು. ದಂಪತಿ ದೆಹಲಿ ನೋಂದಣಿಯ ಕಾರನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ದಂಪತಿ ವಾಸವಿದ್ದ ಮನೆಯಲ್ಲಿ 17 ಲಕ್ಷ ರೂಪಾಯಿ ಕಳ್ಳತನವಾಗಿತ್ತಂತೆ. ಈ ಬಗ್ಗೆ ದಂಪತಿ ಸ್ಥಳೀಯರೊಬ್ಬರಿಗೆ ಹೇಳಿದ್ದರು. ಆದರೆ ಯಾವುದೇ ಪೊಲೀಸರಿಗೆ ದೂರು ನೀಡಿರಲಿಲ್ಲ. 17 ಲಕ್ಷ ರೂಪಾಯಿ ಕಳ್ಳತನವಾಗಿದ್ದರೂ ದಂಪತಿ ಪೊಲೀಸರಿಗೆ ದೂರು ನೀಡದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಮೈಸೂರಿನ ರಿಂಗ್ ರಸ್ತೆಯಲ್ಲಿ ಡ್ರಗ್ಸ್ ಜಾಲ ಪತ್ತೆ ಹಾಗೂ ಹೆಬ್ಬಾಳು ಬಳಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು ಸಾಂಸ್ಕೃತಿಕ ನಗರಿಯಲ್ಲಿ ಬೃಹತ್ ಡ್ರಗ್ಸ್ ಜಾಲವೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ದಂಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ

