ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ರಸ್ತೆಯ ಕುರಿತು ಚರ್ಚೆ ನಡೆಯುತ್ತಿದೆ. ಈಗ ಸುರಂಗ ಮಾದರಿಯಲ್ಲಿಯೇ ನಗರದ ಅತಿ ಉದ್ದದ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಈ ಯೋಜನೆ ಎಲ್ಲಿ ಜಾರಿಗೆ ಬರಲಿದೆ? ಎಂಬುದು ಸೇರಿದಂತೆ ಯೋಜನೆ ಮಾಹಿತಿ ಇಲ್ಲಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಹೆದ್ದಾರಿಯಲ್ಲಿ ಯಲಹಂಕ ಏರ್ ಬೇಸ್ ಸಮೀಪ ಈ ಯೋಜನೆ ಬರಲಿದೆ. ಇದು ನಗರದ ಅತಿ ಉದ್ದದ ಅಂಡರ್ ಪಾಸ್ ಆಗಲಿದ್ದು, ಸರ್ವೀಸ್ ರಸ್ತೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಈ ಯೋಜನೆಯ ಆರ್‌ಎಫ್‌ಪಿ ತಯಾರು ಮಾಡಲು ಟೆಂಡರ್ ಕರೆದಿದೆ. ಮುಖ್ಯ ರಸ್ತೆಯಿಂದ 6 ಮೀಟರ್ ಒಳಭಾಗದಲ್ಲಿ ಈ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಯೋಜನೆ ವೆಚ್ಚ ಜಿಎಸ್‌ಟಿ ಹೊರತುಪಡಿಸಿ ಸುಮಾರು 51.27 ಕೋಟಿ ರೂ.ಗಳು.
ಯೋಜನೆಯ ವಿವರಗಳು: 800 ಮೀಟರ್ ಉದ್ದದ ರಸ್ತೆ, 320 ಮೀಟರ್ ಉದ್ದದ ಸರ್ವೀಸ್ ರಸ್ತೆ, ಭಾರತೀಯ ವಾಯುಪಡೆ ಆಸ್ತಿಗಳ ಸ್ಥಳಾಂತರ ಮತ್ತು ಇತರ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿವೆ.
ಈ ಅಂಡರ್ ಪಾಸ್ ಎರಡು ಮುಖ್ಯ ರಸ್ತೆಗಳನ್ನು ಹೊಂದಿರುತ್ತದೆ. ಒಂದು ರಸ್ತೆ ಭಾರತೀಯ ವಾಯುಪಡೆ ಡೆಮೆಸ್ಟಿಕ್ ಏರಿಯಾದಿಂದ ತಾಂತ್ರಿಕ ವಿಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ರನ್ ವೇ ಮತ್ತು ಹುಣಸಮಾರನಹಳ್ಳಿ ಕೆರೆಗ ಸಂಪರ್ಕ ಕಲ್ಪಿಸುತ್ತದೆ ಎಂದು ಎನ್‌ಎಚ್‌ಎಐ ಬೆಂಗಳೂರು ವಿಭಾಗದ ಯೋಜನಾ ನಿರ್ದೇಶಕರು ಹೇಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಇಲ್ಲದ ಏಕೈಕ ಪ್ರದೇಶವಿದಾಗಿದೆ. 22.12 ಕಿ.ಮೀ.ಉದ್ದದ ಹೆಬ್ಬಾಳ-ಟ್ರಂಪೆಟ್ ಮಾರ್ಗದಲ್ಲಿ ಇದೊಂದು ಬ್ಲಾಕ್ ಸ್ಪಾಟ್ ಆಗಿತ್ತು. ಈ ಅಂಡರ್‌ಪಾಸ್ ಯೋಜನೆಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ.
ಅಧಿಕಾರಿಗಳ ಮಾಹಿತಿಯಂತೆ ಕಟ್ & ಕವರ್ ಮಾದರಿಯ ಕಾಮಗಾರಿಯ ಮೂಲಕ ಈ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ. ನಗರದಲ್ಲಿ ಈಗಿರುವ ಎಲ್ಲಾ ಅಂಡರ್ ಪಾಸ್‌ಗಳಿಗಿಂತ ಉದ್ದದ ಅಂಡರ್ ಪಾಸ್ ಇದಾಗಿದೆ.
ಈಗಾಗಲೇ ನಗರದಲ್ಲಿ ಸುರಂಗ ಮಾರ್ಗ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ತನಕ 16.75 ಕಿ.ಮೀ. ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗವನ್ನು ಟಿಬಿಎಂ ಯಂತ್ರಗಳನ್ನು ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತದೆ.
ಅಂಡರ್‌ಪಾಸ್ ನಿರ್ಮಾಣ ಮಾಡುವಾಗ ಎನ್ಎಚ್ಎಐ ಭಾರತೀಯ ವಾಯುಪಡೆ ಪ್ರವೇಶ ದ್ವಾರ, ಕಾಪೌಂಡ್ ಅನ್ನು ಸ್ಥಳಾಂತರ ಮಾಡಲಾಗುತ್ತದೆ. 200 ಮೀಟರ್ ಕಾಪೌಂಡ್ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ.
ಈ ಯೋಜನೆ ಬಿಡ್ ಅನ್ನು ಫೆಬ್ರವರಿ 25ರಂದು ತೆರೆಯಲಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಅಂಡರ್‌ಪಾಸ್ ಕಾಮಗಾರಿ ಟೆಂಡರ್ ಅನ್ನು ಹಂಚಿಕೆ ಮಾಡಲಾಗುತ್ತದೆ. ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ.
18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಲಾಗುತ್ತದೆ. ಏರೋ ಇಂಡಿಯಾ 2027ಕ್ಕೂ ಮೊದಲು ಕಾಮಗಾರಿಯ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ. ಈ ಕಾಮಗಾರಿ ಸಮಯದಲ್ಲಿ ಯಾವುದೇ ಸಂಚಾರ ಮಾರ್ಗ ಬದಲಾವಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆದ್ದಾರಿ ಪ್ರಾಧಿಕಾರ ಈಗಾಗಲೇ ಏರ್‌ಪೋರ್ಟ್ ರಸ್ತೆಯಲ್ಲಿ ಎರಡು ಕಡೆ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿದೆ. ಮತ್ತೊಂದು ಕಡೆ ಏರ್‌ಪೋರ್ಟ್ ರಸ್ತೆಯನ್ನು ಸಿಗ್ನಲ್ ಫ್ರೀ ಮಾಡುವ ಕಾಮಗಾರಿಯೂ ಶೀಘ್ರದಲ್ಲೇ ಆರಂಭವಾಗಲಿದೆ.

