ಬೆಂಗಳೂರು: ಭೂ ಪರಿವರ್ತನೆ ಮಾಡದೆ ಕೃಷಿ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದಲ್ಲಿ ಅಶ್ವತ್ಥ್ ನಾರಾಯಣ ಅವರನ್ನು ದೋಷಿ ಎಂದು ಪರಿಗಣಿಸಿ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣದ ದೂರುದಾರರಾದ ಡಾ. ಕಾವ್ಯಶ್ರೀ ಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಇದೇ ವೇಳೆ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿ ಇಟ್ಟಿರುವ ನ್ಯಾಯಾಲಯ ಅಶ್ವತ್ಥ್ ನಾರಾಯಣ ಅವರಿಗೆ ಜಾಮೀನು ನೀಡಿದೆ.
ಬೆಂಗಳೂರು ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಸರ್ವೆ ನಂಬರ್ 100/2 ರಲ್ಲಿನ 4 ಎಕರೆ 30 ಗುಂಟೆ ಕೃಷಿ ಜಮೀನನ್ನು ರೈತರಿಂದ ಖರೀದಿಸಿದ್ದ ಅಶ್ವತ್ಥ್ ನಾರಾಯಣ ಅದನ್ನು ಭೂ ಪರಿವರ್ತನೆ ಮಾಡದೆ ನಿವೇಶನಗಳಾಗಿ ವಿಂಗಡಿಸಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಮೈಸೂರಿನ ಡಾ. ಕಾವ್ಯಶ್ರೀ ದೂರು ನೀಡಿದ್ದರು. ವಿಚಾರಣೆ ನಡೆಸಿದ ಭೂ ಕಬಳಿಗೆ ತಡೆ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ.

