ಮುಂಬೈ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದ್ದು, ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮುಂದಿನ ಉಪಮುಖ್ಯಮಂತ್ರಿಯಾಗಲಿದ್ದಾರೆ. ಪ್ರಫುಲ್ ಪಟೇಲ್ ಅವರನ್ನು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್ ಮಹಾರಾಷ್ಟ್ರದ ಅತ್ಯಂತ ದೀರ್ಘಾವಧಿಯ ಉಪಮುಖ್ಯಮಂತ್ರಿಯಾಗಿದ್ದರು ಮತ್ತು ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಹಣಕಾಸು, ಯೋಜನೆ ಮತ್ತು ಅಬಕಾರಿ ಇಲಾಖೆಗಳನ್ನು ಹೊಂದಿದ್ದರು.
ಮೂಲಗಳ ಪ್ರಕಾರ, ಶನಿವಾರ ಮಧ್ಯಾಹ್ನ 2 ಗಂಟೆಗೆ ಎನ್ಸಿಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಸುನೇತ್ರಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಇದರ ನಂತರ, ಸುನೇತ್ರಾ ಅವರು ಸಂಜೆ 5 ಗಂಟೆ ಸುಮಾರಿಗೆ ಮುಂಬೈನ ರಾಜಭವನದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಪ್ರಮಾಣವಚನ ಸಮಾರಂಭಕ್ಕೆ ರಾಜಭವನದಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಲು ಎನ್ಸಿಪಿಯ ಹಿರಿಯ ನಾಯಕರು ಸುನೇತ್ರಾ ಅವರನ್ನು ಭೇಟಿಯಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಎನ್ಸಿಪಿಯ ಎರಡು ಬಣಗಳು ಮತ್ತೆ ವಿಲೀನಗೊಳ್ಳಬಹುದು ಎಂಬ ಊಹಾಪೋಹಗಳು ಕೂಡ ಹರಡಿದ್ದವು, ಆದರೆ ಅದಕ್ಕೆ ಸದ್ಯ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.

