ಕೃತಕ ಬುದ್ಧಿಮತ್ತೆ (ಎಐ) ಜೊತೆ ಈಗ ಹೆಜ್ಜೆ ಹಾಕಬೇಕಾಗಿದೆ. ಹೌದು ಗೂಗಲ್ ಮ್ಯಾಪ್ ವಾಕಿಂಗ್ ಮತ್ತು ಸೈಕ್ಲಿಂಗ್ ಮಾಡುವವರಿಗೆ ಮಹತ್ವದ ಅಪ್‌ಡೇಟ್ ಒಂದನ್ನು ನೀಡಿದೆ. ಗೂಗಲ್ ಮ್ಯಾಪ್‌ಗೆ ಜೆಮಿನಿಯನ್ನು ಜೋಡಿಸಲಾಗಿದೆ.
ಗೂಗಲ್ ಮ್ಯಾಪ್ ಈಗ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಬಳಕೆದಾರರು ನಡೆಯುವಾಗ ಮತ್ತು ಸೈಕಲ್ ಚಲಾಯಿಸುವಾಗಲೂ ಜೆಮಿನಿಯನ್ನು ಬಳಸಲು ಇದು ಅವಕಾಶವನ್ನು ನೀಡುತ್ತದೆ.
ವಾಹನ ಚಾಲನೆ, ಸಾರ್ವಜನಿಕ ಸಾರಿಗೆ ಬಳಕೆ ಸೇರಿದಂತೆ ಹೆಚ್ಚಿನ ನ್ಯಾವಿಗೇಷನ್ ಮೋಡ್‌ಗಳಲ್ಲಿ ಜೆಮಿನಿ-ಚಾಲಿತ ಹ್ಯಾಂಡ್ಸ್-ಫ್ರೀ ಸಂಭಾಷಣೆಗಳನ್ನು ಹೊರತಂದ ಕೆಲವು ತಿಂಗಳುಗಳ ನಂತರ ಈ ಮಹತ್ವದ ಅಪ್‌ಡೇಟ್ ಬಂದಿದೆ.
ನಡೆಯುವಾಗ ಅಥವಾ ಸೈಕಲ್ ತುಳಿಯುವಾಗ ಜೆಮಿನಿ ಬಳಸಲು ಗೂಗಲ್ ಮ್ಯಾಪ್ ಬಲ ಮೇಲ್ಭಾಗದಲ್ಲಿರುವ ಜೆಮಿನಿ ಐಕಾನ್ ಮೇಲೆ ಟ್ಯಾಪ್ ಮಾಡಿ ಅಥವಾ Hey Google ಎಂದು ಹೇಳುವ ಮೂಲಕ ಎಐ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಬಹುದು.
ಈ ಕುರಿತು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಜೆಮಿನಿ ಬಳಕೆದಾರರಿಗೆ ಒಬ್ಬ ವೈಯಕ್ತಿಕ ವಾಕಿಂಗ್ ಟೂರ್ ಗೈಡ್ ರೀತಿಯಲ್ಲಿ ಜೆಮಿನಿ ಸಹಾಯ ಮಾಡುತ್ತದೆ. ಇನ್ನು ಮುಂದೆ ಗೂಗಲ್ ಮ್ಯಾಪ್ ಬಳಕೆದಾರರು ಓಕೆ ಗೂಗಲ್, ನಾನು ಈಗ ಯಾವ ಏರಿಯಾದಲ್ಲಿದ್ದೇನೆ? ಅಥವಾ ಹತ್ತಿರದಲ್ಲಿರುವ ಟಾಪ್-ರೇಟೆಡ್ ರೆಸ್ಟೋರೆಂಟ್‌ಗಳು ಯಾವುವು? ಎಂಬಂತಹ ಪ್ರಶ್ನೆಗಳನ್ನು ಕೇಳಬಹುದು.
ಇದಕ್ಕೆ ಪ್ರತಿಯಾಗಿ ಜೆಮಿನಿ ನಮ್ಮ ಮಾರ್ಗದಲ್ಲಿರುವ ಉತ್ತಮ ಸ್ಥಳಗಳನ್ನು ಶಿಫಾರಸು ಮಾಡುತ್ತದೆ ಮತ್ತು ನಿಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಹೊಸದಾಗಿ ಯಾವುದಾದರೂ ಜಾಗಕ್ಕೆ ಹೋದಾಗ ಈ ಫೀಚರ್ ಜನರಿಗೆ ಸಹಾಯಕವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಉದಾಹರಣೆ: ಗೂಗಲ್ ಮ್ಯಾಪ್‌ಗೆ ನೀವು ಜೆಮಿನಿಯನ್ನು ಜೋಡಣೆ ಮಾಡಿದರೆ ಚಾಟ್ ಬಾಟ್ ಸ್ವಯಂಚಾಲಿತವಾಗಿ ನಿಮ್ಮ ಸಂದೇಶವನ್ನು ಕಳುಹಿಸುತ್ತದೆ. ಗೂಗಲ್ ಮ್ಯಾಪ್ ಬಳಕೆದಾರರು ಇನ್ನು ಮುಂದೆ ತಮ್ಮ ಫೋನ್ ಅನ್ನು ಅನ್ಲಾಕ್ ಮಾಡಬೇಕಾಗಿಲ್ಲ ಅಥವಾ ಪ್ರಯಾಣದಲ್ಲಿರುವಾಗ ಮಾಹಿತಿಯನ್ನು ಕೇಳಲು ಬಳಸಬೇಕಾಗಿಲ್ಲ.
ವಾಹನ ಚಾಲನೆ ಮಾಡುವಾಗ ರಸ್ತೆಯ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಅವರ ಫೋನ್‌ಗಳಿಂದ ವಿಚಲಿತರಾಗುವುದನ್ನು ಇದು ತಪ್ಪಿಸುತ್ತದೆ.
ಬಳಕೆದಾರರು ಪಾರ್ಕಿಂಗ್ ಸ್ಥಳಗಳು, ಹತ್ತಿರದ ರೆಸ್ಟೋರೆಂಟ್, ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಪೆಟ್ರೋಲ್ ಬಂಕ್‌ನಂತಹ ತಮ್ಮ ಪ್ರಯಾಣದ ಸಂಬಂಧಿತ ಮಾಹಿತಿಯನ್ನು ಗೂಗಲ್ ಮ್ಯಾಪ್ ಮೂಲಕ ಕೇಳಬಹುದು. ಆದರೆ ಸದ್ಯ ಹೊಸ ಫೀಚರ್ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಲಭ್ಯವಿಲ್ಲ.

