ಹೈದರಾಬಾದ್ನಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ನಾಗರಿಕ ವಿಮಾನಯಾನ ಪ್ರದರ್ಶನ ‘ವಿಂಗ್ಸ್ ಇಂಡಿಯಾ-2026’ (Wings India-2026) ರಲ್ಲಿ ಕರ್ನಾಟಕವು ‘ಸ್ಟೇಟ್ ಚಾಂಪಿಯನ್ ಇನ್ ಏವಿಯೇಷನ್’ (State Champion in Aviation) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಫಿಕ್ಕಿ (FICCI) ಜಂಟಿಯಾಗಿ ಈ ಗೌರವವನ್ನು ನೀಡುತ್ತವೆ. ವಿಮಾನಯಾನ ಕ್ಷೇತ್ರದಲ್ಲಿ ಅತ್ಯುತ್ತಮ ಮೂಲಸೌಕರ್ಯ ಅಭಿವೃದ್ಧಿ, ಪ್ರಾದೇಶಿಕ ಸಂಪರ್ಕ ಮತ್ತು ನಾವೀನ್ಯತೆಯನ್ನು ಸಾಧಿಸಿದ ರಾಜ್ಯಕ್ಕೆ ಈ ‘ಸ್ಟೇಟ್ ಚಾಂಪಿಯನ್’ ಪಟ್ಟ ಸಿಗುತ್ತದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು (KSIIDC) ರಾಜ್ಯದ ವಿಮಾನಯಾನ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.
ಸಿಎಂ ಸಿದ್ದರಾಮಯ್ಯ ಸಂತಸ
ವಿಂಗ್ಸ್ ಇಂಡಿಯಾ–2026′ ರಲ್ಲಿ ಕರ್ನಾಟಕವು ‘ವಿಮಾನಯಾನ ಕ್ಷೇತ್ರದ ಶ್ರೇಷ್ಠ ರಾಜ್ಯ’ (State Champion in Aviation) ಪ್ರಶಸ್ತಿಗೆ ಆಯ್ಕೆಯಾಗಿದೆ.ಈ ಮೈಲಿಗಲ್ಲನ್ನು ಸಾಧಿಸಲು ಶ್ರಮಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC), ನಾಗರಿಕ ವಿಮಾನಯಾನ ಇಲಾಖೆ, ಭಾರತ ಸರ್ಕಾರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ಎಲ್ಲಾ ಪಾಲುದಾರರ ಸಾಮೂಹಿಕ ಪ್ರಯತ್ನಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಗೌರವವು ನಮ್ಮ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಇದು ಪುನರುಚ್ಚರಿಸುವುದಲ್ಲದೆ, ಮೂಲಸೌಕರ್ಯ ಆಧಾರಿತ ಮತ್ತು ಸಂಪರ್ಕ-ಚಾಲಿತ ಬೆಳವಣಿಗೆಗೆ ನಮ್ಮ ಸರ್ಕಾರ ಹೊಂದಿರುವ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

