HomeLatest Newsಗ್ರಾಮೀಣ ಜನರ ಹಕ್ಕುಗಳನ್ನು ಕಸಿಯುತ್ತಿರುವ ಕೇಂದ್ರದ ವಿರುದ್ಧ 'ಗ್ರಾಮಸಂಗ್ರಾಮ' : ಸಚಿವ ಪ್ರಿಯಾಂಕ್ ಖರ್ಗೆ

ಗ್ರಾಮೀಣ ಜನರ ಹಕ್ಕುಗಳನ್ನು ಕಸಿಯುತ್ತಿರುವ ಕೇಂದ್ರದ ವಿರುದ್ಧ ‘ಗ್ರಾಮಸಂಗ್ರಾಮ’ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು :   ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸಬೇಕು, ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು ಎಂಬ ಸದುದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯನ್ನು ಜಾರಿಗೆ ತರಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ಪುರುಷರಿಗೂ, ಮಹಿಳೆಯರಿಗೆ ಸಮಾನವಾದ ವೇತನ ನೀಡುವ ಮೂಲಕ ವಾರ್ಷಿಕವಾಗಿ 100 ದಿನದ ಉದ್ಯೋಗವನ್ನು ನೀಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ವಿಬಿ ಗ್ರಾಮ್ ಜಿ ಇದೆಲ್ಲ ಹಕ್ಕುಗಳನ್ನು ಹಿಂಪಡೆದು, ಮರಣ ಶಾಸನ ಬರೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ರಾಜ್ಯಗಳೂ ಅನುದಾನದ ಪಾಲು ಹಂಚಿಕೊಳ್ಳಬೇಕು ಎಂಬ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು, ಈ ಮೂಲಕ ಈಗಾಗಲೇ ಸೊರಗಿರುವ ರಾಜ್ಯ ಸರ್ಕಾರಗಳ ಆರ್ಥಿಕತೆಯ ಮೇಲೆ ಇನ್ನಷ್ಟು ಹೊರೆ ಹೊರಿಸಿದೆ. ಗ್ರಾಮಗಳ ಸ್ವಯಂ ಆಡಳಿತದ ಮೂಲಕವೇ ಅಭಿವೃದ್ಧಿ ಸಾಧ್ಯ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ‘ಗ್ರಾಮ ಸ್ವರಾಜ್ಯ’ದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮನರೇಗಾ ಯೋಜನೆ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿತ್ತು. ಆದರೆ, ಕೇಂದ್ರ ಸರ್ಕಾರದ ಹೊಸ ಕಾಯ್ದೆ ಗ್ರಾಮಗಳ ಸ್ವಾಯತ್ತತೆ, ಅಧಿಕಾರ ವಿಕೇಂದ್ರೀಕರಣ, ಗ್ರಾಮೀಣ ಕಾರ್ಮಿಕರ ಜೀವನೋಪಾಯದ ಮೇಲಿನ ನೇರ ಪ್ರಹಾರವಾಗಿದೆ. ಕೇಂದ್ರದ ಈ ಅನೀತಿಗಳ ವಿರುದ್ಧ ರಾಜ್ಯ ಸರ್ಕಾರಗಳು ಹಾಗೂ ಗ್ರಾಮೀಣ ಜನತೆ ಸಿಡಿದೇಳಲಿದ್ದಾರೆ. ಹಳ್ಳಿಗಳ ಆಕ್ರೋಶ ದಿಲ್ಲಿಯ ಸರ್ವಾಧಿಕಾರಿಯಲ್ಲಿ ನಡುಕ ಹುಟ್ಟಿಸುವುದು ಖಚಿತ. ನರೇಗಾ ಮರುಸ್ಥಾಪನೆಯಾಗುವವರೆಗೂ ನಮ್ಮ ಗ್ರಾಮ ಸಂಗ್ರಾಮ ಮುಂದುವರಿಯಲಿದೆ ಎಂದರು.

ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಪಂಚಾಯತಿಗಳ ಪ್ರಸ್ತುತ ಅವಧಿ 2026ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಗ್ರಾಮೀಣ ವಿಕೇಂದ್ರೀಕರಣದಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ ಮತ್ತು ಪಂಚಾಯತಿ ಮಟ್ಟದ ಆಡಳಿತವನ್ನು ಉಳಿಸಿಕೊಳ್ಳಲು ಹಾಗೂ ಅವುಗಳ ಅವಧಿ ಮುಗಿಯುವ ಮೊದಲೇ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ. ಈ ಕುರಿತು ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದಿಂದ ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಗಮನಹರಿಸಬೇಕೆಂದು ಕೇಂದ್ರ ಪಂಚಾಯತ್ ರಾಜ್ ಸಚಿವರಾದ ರಾಜೀವ್ ರಂಜನ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

2025–26ನೇ ಹಣಕಾಸು ವರ್ಷದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಲ್ಲಿನ ನಿರಂತರ ವಿಳಂಬದ ಕುರಿತು 2025ರ ಡಿಸೆಂಬರ್ 08 ರಂದು ಬರೆದ ಪತ್ರವನ್ನು ಬರೆಯಲಾಗಿತ್ತು. 2025ರ ಆಗಸ್ಟ್ ತಿಂಗಳಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಗಳನ್ನು (GPDP ಗಳು) ಸಕಾಲಿಕವಾಗಿ ಅಪ್ಲೋಡ್ ಮಾಡಿರುವುದನ್ನು ಖಚಿತಪಡಿಸಿಕೊಂಡು, 2025ರ ಜುಲೈ 08 ಮತ್ತು ಸೆಪ್ಟೆಂಬರ್ 24ರಂದು ಅಗತ್ಯವಿರುವ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಗ್ರಾಮಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವ ಮೂಲಕ ಗ್ರಾಮಗಳ ಸಬಲೀಕರಣಕ್ಕೆ ಸಹಕರಿಸಬೇಕು ಎಂದು ಸಚಿವರಿಗೆ ಪತ್ರದಲ್ಲಿ ಕೋರಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ  ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular