ಬೆಳಗಾವಿ: ವಿವಾಹಿತ ವ್ಯಕ್ತಿ ಮತ್ತು ಆತನ ಪ್ರೇಯಸಿ ತಬ್ಬಿ ಹಗ್ಗ ಬಿಗಿದುಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ಜಗದೀಶ್ ಯಲ್ಲಪ್ಪ ಕವಳೇಕರ(27) ಮತ್ತು ಗಂಗಮ್ಮ(26) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ಬೆಳಗ್ಗೆ ಮಲಪ್ರಭಾ ನದಿಯಲ್ಲಿ ಇಬ್ಬರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದ್ದು, ಗ್ರಾಮಸ್ಥರು ರಾಮದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಬೇರೆ ಯುವತಿಯೊಂದಿಗೆ ಜಗದೀಶ್ ಮದುವೆ ಮಾಡಲಾಗಿತ್ತು. ಜಗದೀಶ್ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದರು. ಗಂಗಮ್ಮ ಅವರೊಂದಿಗೆ ಎರಡನೇ ಮದುವೆ ಮಾಡುವಂತೆ ಜಗದೀಶ್ ತಮ್ಮ ಮನೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಕುಟುಂಬದವರು ಒಪ್ಪಿರಲಿಲ್ಲ. ತವರು ಮನೆಯಿಂದ ಪತ್ನಿ ಬಂದ ಬಳಿಕ ಎರಡನೇ ಮದುವೆ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಮನೆ ತೊರೆದಿದ್ದ ಜಗದೀಶ್ ಗಂಗಮ್ಮರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ:
ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

