ಬೆಂಗಳೂರು: ರಾಜ್ಯ ಸರ್ಕಾರವು ಕೇಂದ್ರ ಮತ್ತು ಲೋಕಭವನದ ನಡುವಿನ ದೂರವಾಣಿ ಕದ್ದಾಲಿಕೆ ಮಾಡಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ ಎಂದು ಹೇಳಿರುವ ಸಚಿವ ಹೆಚ್.ಕೆ. ಪಾಟೀಲ್ ಅವರ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಹೆಚ್.ಕೆ. ಪಾಟೀಲ್ ರಾಜ್ಯಪಾಲರಿಗೆ ದೆಹಲಿಯಿಂದ ಫೋನ್ ಮಾಡಿಸಿ ಭಾಷಣದಿಂದ ಅರ್ಧಕ್ಕೆ ಹೋಗುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ದನಿಗೂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಶವ ಕೃಪಾ ಮತ್ತು ದೆಹಲಿಯಿಂದ ರಾಜ್ಯಪಾಲರಿಗೆ ಕರೆ ಬಂದಿದೆ. ಎಂದು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್. ಅಶೋಕ್, ಲೋಕಭವನ ಮತ್ತು ದೆಹಲಿ ನಡುವೆ ದೂರವಾಣಿ ಸಂಭಾಷಣೆ ನಡೆದಿದ್ದರೆ ಅದು ಸಚಿವರಾದ ಹೆಚ್.ಕೆ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಹೇಗೆ ಗೊತ್ತಾಯಿತು. ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡಿದೆ. ಸಚಿವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

