ಬುಧವಾರ ಬೆಳಗ್ಗೆ ಘೋರ ದುರಂತವೊಂದು ನಡೆದಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ಖಾಸಗಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಎಲ್ಲಾ 6 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಮತ್ತು ಇತರರು ಖಾಸಗಿ ವಿಮಾನದಲ್ಲಿ ಹೊರಟಿದ್ದರು. ಬುಧವಾರ ಬೆಳಗ್ಗೆ ಬಾರಾಮತಿ ಬಳಿ ವಿಮಾನ ಲ್ಯಾಂಡ್ ಆಗುವವಾಗ ತಾಂತ್ರಿಕ ದೋಷ ಕಂಡುಬಂದಿದ್ದು, ಪತನಗೊಂಡಿದೆ. ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ವಿಮಾನದಲ್ಲಿ ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 6 ಜನರಿದ್ದರು. ಬಾರಾಮತಿ ಬಳಿ ಬೆಳಗ್ಗೆ 8.45ರ ಸುಮಾರಿಗೆ ವಿಮಾನ ಲ್ಯಾಂಡ್ ಮಾಡುವಾಗ ಈ ದುರ್ಘಟನೆ ನಡೆದಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ.
ಈ ಖಾಸಗಿ ವಿಮಾನ ಮುಂಬೈನಿಂದ ಬಾರಾಮತಿಗೆ ಬಂದಿತ್ತು. ಬಾರಾಮತಿ ಬಳಿ ವಿಮಾನ ಲ್ಯಾಂಡ್ ಆಗುವಾಗ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಪತನಗೊಂಡ ವಿಮಾನ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಮಾನವು ಲ್ಯಾಂಡ್ ಆಗುವಾಗ ತಾಂತ್ರಿಕ ಸಮಸ್ಯೆ ಉಂಟಾಗಿದೆ. ರನ್‌ವೇ ಮೇಲೆಯೇ ವಿಮಾನ ಅಪ್ಪಳಿಸಿದೆ. ಈ ಘಟನೆ ಕಾರಣ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬರುವ ಮತ್ತು ಹೊರಡುವ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.
ಅಜಿತ್ ಪವಾರ್ ಅವರು ಇಂದು ಬಾರಾಮತಿಯಲ್ಲಿ ಹಲವಾರು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದ್ದರಿಂದ ಪಕ್ಷ ಇನ್ನೂ ಐದು ಜನ ನಾಯಕರ ಜೊತೆ ಅವರು ಖಾಸಗಿ ವಿಮಾನದಲ್ಲಿ ಹೊರಟಿದ್ದರು. ಪೊಲೀಸರು, ಅಗ್ನಿಶಾಮಕ ದಳ, ವಿವಿಧ ರಕ್ಷಣಾ ದಳದ ಸಿಬ್ಭಂದಿ ಸ್ಥಳಕ್ಕೆ ಧಾವಿಸಿದ್ದಾರೆ. ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಅಜಿತ್ ಪವಾರ್ ವಿಮಾನದಲ್ಲಿ ಆಗಮಿಸುತ್ತಾರೆ ಎಂದು ಅವರ ಭದ್ರತಾ ಸಿಬ್ಭಂದಿಗಳು ಕಾದು ನಿಂತಿದ್ದರು. ವಿಮಾನ ಪತನಗೊಂಡು ಅಜಿತ್ ಪವಾರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ.
ವಿಮಾನದಲ್ಲಿ ಅಜಿತ್ ಪವಾರ್ ಸೇರಿ 6 ಜನರಿದ್ದರು ಎಂದು ಡಿಜಿಸಿಎ ಖಚಿತಪಡಿಸಿದೆ. 66 ವರ್ಷದ ಅಜಿತ್ ಪವಾರ್ ಮಂಗಳವಾರ ಮುಂಬೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರ ಅವರು ಪುಣೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳಬೇಕಿತ್ತು.
ಖಾಸಗಿ ವಿಮಾನದಲ್ಲಿ ಇಬ್ಬರು ಪೈಲೆಟ್, ಒಬ್ಬರು ಕ್ಯಾಬಿನ್ ಸಿಬ್ಬಂದಿ ಇದ್ದರು. ಅಜಿತ್ ಪವಾರ್, ಅಜಿತ್ ಪವಾರ್ ಆಪ್ತ ಸಹಾಯಕ ವಿಮಾನದಲ್ಲಿದ್ದರು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ಎನ್‌ಸಿಪಿ ಪಕ್ಷ ಎರಡು ಹೋಳಾದಾಗ ಅಜಿತ್ ಪವಾರ್ ಬಣ ಬೇರೆಯಾಗಿತ್ತು. ಈ ಬಣ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತ್ತು. ಆದ್ದರಿಂದ ಮಹಾರಾಷ್ಟ್ರದ ಆಡಳಿತಾರೂಢ ಮಹಾಯತಿ ಮೈತ್ರಿಕೂಟದಲ್ಲಿ ಅಜಿತ್ ಪವಾರ್‌ಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯತಿ ಮೈತ್ರಿಕೂಟ ಸರ್ಕಾರದಲ್ಲಿ ಅಜಿತ್ ಪವಾರ್, ಏಕನಾಥ್ ಶಿಂಧೆ ಇಬ್ಬರು ಸಹ ಉಪಮುಖ್ಯಮಂತ್ರಿಗಳು. ಈ ಹಿಂದೆ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾಗಲೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿದ್ದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ನಾಯಕರು ಕೆಲವೇ ಕ್ಷಣಗಳಲ್ಲಿ ಬಾರಾಮತಿಗೆ ಆಗಮಿಸುವ ನಿರೀಕ್ಷೆ ಇದೆ. ಅಜಿತ್ ಪವಾರ್ ಮೃತದೇಹವನ್ನು ಗುರುತಿಸಿ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಸದ್ಯ ಆಸ್ಪತ್ರೆಗೆ ಶವಗಳನ್ನು ಸಾಗಣೆ ಮಾಡಲಾಗುತ್ತಿದೆ.

