ನಾವೆಲ್ಲರೂ ಗಮನಿಸಿರುವಂತೆ ಆಸ್ಪತ್ರೆ ಎಂದರೆ ಅಲ್ಲಿ ಬಿಳಿ ಕೋಟಿನ ವೈದ್ಯರು, ಕೋರ್ಟ್ ಎಂದರೆ ಅಲ್ಲಿ ಕಪ್ಪು ಕೋಟಿನ ವಕೀಲರು ಕಣ್ಣೆದುರು ಬರುತ್ತಾರೆ. ಆದರೆ ನಿಮಗೆ ಗೊತ್ತಾ? ಒಂದು ಕಾಲದಲ್ಲಿ ಇವರಿಬ್ಬರ ನಡುವೆ ಬಣ್ಣದ ವ್ಯತ್ಯಾಸವೇ ಇರಲಿಲ್ಲ 19ನೇ ಶತಮಾನದವರೆಗೂ ವೈದ್ಯರು ಮತ್ತು ವಕೀಲರು ಇಬ್ಬರೂ ಕಪ್ಪು ಬಣ್ಣದ ಕೋಟುಗಳನ್ನೇ ಧರಿಸುತ್ತಿದ್ದರು. ಇದು ಅಂದಿನ ಕಾಲದ ಸಾಮಾನ್ಯ ಜನರಲ್ಲಿ ಅದೆಷ್ಟು ಗೊಂದಲ ಮೂಡಿಸುತ್ತಿತ್ತೆಂದರೆ ಯಾರು ಜೀವ ಉಳಿಸುವವರು ಮತ್ತು ಯಾರು ನ್ಯಾಯ ಕೊಡಿಸುವವರು ಎಂದು ಗುರುತಿಸುವುದೇ ಕಷ್ಟವಾಗುತ್ತಿತ್ತು.
ಆದರೆ, ಕಾಲ ಬದಲಾದಂತೆ ಮೆಡಿಕಲ್ ಲೋಕ ತನ್ನ ಹಾದಿಯನ್ನು ಬದಲಿಸಿತು. ರೋಗಿಗಳ ನಂಬಿಕೆ ಗಳಿಸಲು ಮತ್ತು ವಿಜ್ಞಾನದ ಬೆಳವಣಿಗೆಯಿಂದಾಗಿ ವೈದ್ಯರು ಕಪ್ಪನ್ನು ಬಿಟ್ಟು ಬಿಳಿಗೆ ಶರಣಾದರು. ಈ ಬದಲಾವಣೆಯ ಹಿಂದೆ ಅಡಗಿರುವ ಅಸಲಿ ಕಾರಣಗಳು ಯಾವುವು? ವೈದ್ಯರು ಬಿಳಿ ಕೋಟು ಧರಿಸಲು ಶುರುಮಾಡಿದ್ದೇಕೆ? ವಕೀಲರು ಕಪ್ಪು ಕೋಟನ್ನೇ ಉಳಿಸಿಕೊಂಡಿದ್ದೇಕೆ? ಇಲ್ಲಿದೆ ಮಾಹಿತಿ
ವೈದ್ಯರ ಬಿಳಿ ಕೋಟಿನ ಹಿಂದಿದೆ ಶುದ್ಧತೆಯ ಮಂತ್ರ
ವೈದ್ಯಕೀಯ ವೃತ್ತಿಯಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ಶಿಫ್ಟ್ ಆಗಲು ಪ್ರಮುಖ ಕಾರಣ ನೈರ್ಮಲ್ಯ (Hygiene).
ಸ್ವಚ್ಛತೆಯ ಸಂಕೇತ: ವೈದ್ಯಕೀಯ ಕ್ಷೇತ್ರವು ಬ್ಯಾಕ್ಟೀರಿಯಾ ಮುಕ್ತವಾಗಿರಬೇಕು. ಬಿಳಿ ಬಣ್ಣವು ಅತ್ಯಂತ ಶುದ್ಧವಾದ ಬಣ್ಣವಾಗಿದ್ದು, ಇದರ ಮೇಲೆ ಸಣ್ಣ ಕಲೆ ಅಥವಾ ಕೀಟಾಣುಗಳಿದ್ದರೂ ತಕ್ಷಣವೇ ಎದ್ದು ಕಾಣುತ್ತದೆ. ಇದು ವೈದ್ಯರು ತಮ್ಮ ಬಟ್ಟೆ ಮತ್ತು ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಲು ಪ್ರೇರೇಪಿಸುತ್ತದೆ.
ರೋಗಿಗಳ ವಿಶ್ವಾಸ: ಬಿಳಿ ಬಣ್ಣವು ಮನಸ್ಸನ್ನು ಪ್ರಶಾಂತಗೊಳಿಸುವ ಗುಣ ಹೊಂದಿದೆ. ಬಿಳಿ ಕೋಟು ಧರಿಸಿದ ವೈದ್ಯರನ್ನು ಕಂಡಾಗ ರೋಗಿಗಳಲ್ಲಿ ಭಯ ಕಡಿಮೆಯಾಗಿ, ಅವರ ಮೇಲೆ ನಂಬಿಕೆ ಮತ್ತು ಗೌರವ ಹೆಚ್ಚಾಗುತ್ತದೆ.
ರಕ್ಷಣಾ ಕವಚ: ಹಾನಿಕಾರಕ ಟಾಕ್ಸಿನ್ ಮತ್ತು ಸೋಂಕುಗಳಿಂದ ರಕ್ಷಿಸಿಕೊಳ್ಳಲು ಹಾಗೂ ಆಸ್ಪತ್ರೆಯ ವಾತಾವರಣವನ್ನು ಕ್ರಿಮಿಮುಕ್ತವಾಗಿಡಲು ಈ ಬಿಳಿ ಕೋಟು ಒಂದು ಗುರುತಾಗಿ ಮಾರ್ಪಟ್ಟಿದೆ.
ನ್ಯಾಯದ ಸಂಕೇತ ಕಪ್ಪು ಕೋಟು: ಇದರ ಇತಿಹಾಸವೇ ರೋಚಕ
ವಕೀಲರು ಕಪ್ಪು ಕೋಟು ಧರಿಸುವ ಸಂಪ್ರದಾಯ ಇವತ್ತಿನದಲ್ಲ ಇದು ಬ್ರಿಟಿಷರ ಕಾಲದಿಂದಲೂ ನಡೆದುಬಂದಿದೆ.
ರಾಜನ ಸಾವಿನ ಶೋಕ: 1665ರಲ್ಲಿ ಬ್ರಿಟನ್‌ನ ರಾಜ ಚಾರ್ಲ್ಸ್ II ಮರಣ ಹೊಂದಿದಾಗ, ಅವರ ಗೌರವಾರ್ಥವಾಗಿ ನ್ಯಾಯಾಧೀಶರು ಮತ್ತು ವಕೀಲರು ಕಪ್ಪು ಬಟ್ಟೆ ಧರಿಸಬೇಕೆಂದು ಆದೇಶಿಸಲಾಯಿತು. ಅದೇ ಮುಂದೆ ಸಂಪ್ರದಾಯವಾಯಿತು.
ಗಂಭೀರತೆಯ ಸಂಕೇತ: ಕಪ್ಪು ಬಣ್ಣವು ಅಧಿಕಾರ, ಘನತೆ ಮತ್ತು ವೃತ್ತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ನಿಷ್ಪಕ್ಷಪಾತ ನ್ಯಾಯ: ಕಪ್ಪು ಬಣ್ಣವು ನ್ಯಾಯದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಮತ್ತು ಯಾವುದೇ ಪಕ್ಷಪಾತವಿಲ್ಲದೆ ತೀರ್ಪು ನೀಡುವ ಬದ್ಧತೆಯನ್ನು ಸೂಚಿಸುತ್ತದೆ.
ಭಾರತದಲ್ಲಿ ಕಡ್ಡಾಯ: ಭಾರತದಲ್ಲಿ ಬ್ರಿಟಿಷ್ ಕಾನೂನು ಪದ್ಧತಿಯೇ ಮುಂದುವರಿದ ಕಾರಣ, 1961ರ ಅಡ್ವೊಕೇಟ್ಸ್ ಆಕ್ಟ್ ಪ್ರಕಾರ ವಕೀಲರಿಗೆ ಕಪ್ಪು ಕೋಟು ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು.

