ರಾಮನಗರ: ಮುಂದಿನ ಬಾರಿ ರಾಜ್ಯದಲ್ಲಿ ಮತ್ತೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, 2028ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಬಿಡದಿ ಬಳಿ ಟೌನ್ ಶಿಪ್ ನಿರ್ಮಾಣಕ್ಕೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ 2028ಕ್ಕೆ ರಾಮರಾಜ್ಯ, ರೈತರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿಯೇ ಭಗವಣ್ತ ನನ್ನನ್ನು ೫ನೇ ಬಾರಿ ಬದುಕಿಸಿದ್ದಾನೆ ಎಂದು ಭರವಸೆ ನೀಡಿದ್ದಾರೆ.
ಈಗಿರುವ ಕಾಂಗ್ರೆಸ್ ಸರ್ಕಾರದ ಆಯಸ್ಸು ಇನ್ನೆರಡು ವರ್ಷ ಮಾತ್ರ. 2028ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನನಗೆ ಸಿಎಂ ಆಗುವುದು ಮುಖ್ಯವಲ್ಲ ನಾಡಿನಲ್ಲಿ ಜನತೆಯ ಸರ್ಕಾರ ತರುವುದು ಮುಖ್ಯ ಎಂದರು. ಸಿಎಂ ಸಿದ್ದರಾಮಯ್ಯ ಯಾವ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ. 2028ರಲ್ಲಿಯೂ ಸಿದ್ದರಾಮಯ್ಯ ಅವರಪ್ಪನಾಣೆ ಹೆಚ್ ಡಿಕೆ ಸಿಎಂ ಆಗಲ್ಲ ಎಂದಿದ್ದರು. ಆಮೇಲೆ ಏನಾಯ್ತು? ಅವರೇ ನಮ್ಮ ಮನೆ ಬಾಗಿಲಿಗೆ ಬಂದರು. ನಾನು ಮುಖ್ಯಮಂತ್ರಿಯಾದೆ. ಈಗಿರುವ ಕಾಂಗ್ರೆಸ್ ಸರ್ಕಾರ ಅವಧಿ ಎರಡು ವರ್ಷ ಮಾತ್ರ. 2028ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರದ ಜನರು ನನ್ನನ್ನು ಮನೆಮಗನನ್ನಾಗಿ ಸ್ವೀಕರಿಸಿದ್ದಾರೆ. ನಾಲ್ಕು ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ನನ್ನ ಅಂತಿಮವಾದ ದಿನಗಳು, ಹೋರಾಟಗಳು ರಾಮನಗರದಲ್ಲೇ ನಡೆಯಲಿದೆ. ಮಂಡ್ಯದ ಜನರ ಒತ್ತಡಕ್ಕೆ ಮಣಿದು ಮಂಡ್ಯಕ್ಕೆ ಹೋಗಿದ್ದೆ ಅಷ್ಟೇ ಎಂದು ಹೇಳುವ ಮೂಲಕ ರಾಮನಗರದಿಂದ ಸ್ಪರ್ಧಿಸುವುದಾಗಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

