ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಕೈಗೊಂಡಿದೆ.
ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ದಸ್ತಾವೇಜು ನೋಂದಣಿ ಕಾಗದರಹಿತ ಸೇವೆಯಾಗಿ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಸೇವೆ ಆರಂಭಿಸಲಾಗಿತ್ತು. ಕಾಗದ ರಹಿತ ನೋಂದಣಿ ಸೇವೆಗೆ ಕಾವೇರಿ 2.0 ತಂತ್ರಾಂಶವನ್ನು ಅಪ್ ಗ್ರೇಡ್ ಮಾಡಲಾಗುತ್ತಿದೆ. ರಿಜಿಸ್ಟ್ರೇಷನ್ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ನಲ್ಲೆ ನಡೆಯಲಿದೆ. ನೋಂದಣಿಯ ನಂತರ ದಾಖಲೆ ಪತ್ರ ಕೈಗೆ ಸಿಗುವುದಿಲ್ಲ. ಬದಲಿಗೆ ಲಾಗಿನ್ ಐಡಿ ಪಾಸ್ವರ್ಡ್ ನೀಡಲಿದ್ದು, ಏನೇ ವ್ಯವಹಾರವಿದ್ದರೂ ಈ ಮೂಲಕವೇ ನಡೆಸಬೇಕಿದೆ.
ನಿವೇಶನ, ಜಮೀನು, ಮನೆ, ವಾಣಿಜ್ಯ, ಕಟ್ಟಡ ಮೊದಲಾದ ಸ್ಥಿರಾಸ್ತಿಗಳ ಸೇರಿ ಕಾಗದದ ಮೇಲೆ ಪಕ್ಷಕಾರರ ನಡುವಿನ ವ್ಯವಹಾರವನ್ನು ಮುದ್ರಿಸಲಾಗುವುದು. ನಂತರ ಕಾವೇರಿ ಲಾಗಿನ್ ನಲ್ಲಿ ದಸ್ತಾವೇಜು ಆಸ್ತಿಯ ವಿವರವನ್ನು ಸರ್ಕಾರದ ದತ್ತಾಂಶದಿಂದ ಸ್ವೀಕರಿಸಿ ಅಪ್ಲೋಡ್ ಮಾಡಲಾಗುತ್ತದೆ. ಉಪ ನೋಂದಣಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಿದೆ.
ಆನ್ಲೈನ್ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ, ಡಿಜಿಟಲ್ ಸಿಗ್ನೇಚರ್ ಪ್ರಮಾಣ ಪತ್ರ ಮೂಲಕ ಸಹಿ ಮಾಡಬೇಕು. ನೋಂದಣಿಗಾಗಿ ಸಬ್ ರಿಜಿಸ್ಟ್ರಾರ್ ಲಾಗಿಲ್ ಗೆ ಕಳುಹಿಸಬೇಕು. ಭೌತಿಕ ದಾಖಲೆ ಅಥವಾ ಕಾಗದವನ್ನು ಅಧಿಕಾರಿಗಳ ಮುಂದೆ ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ.
ರಹಿತ ದಾಖಲೆಯನ್ನು ನೋಂದಣಿ ಕಾಯ್ದೆ ನಿಯಮಗಳನ್ನುಯ ಪರಿಶೀಲನೆ ನಡೆಸಿ ಪಕ್ಷಗಾರರು, ಸಾಕ್ಷಿಗಳ ಭಾವಚಿತ್ರ ಮತ್ತು ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕವೇ ಪಡೆಯಲಾಗುವುದು. ನೋಂದಾಯಿತ ದಸ್ತಾವೇಜು ದಾಖಲೆ ಸ್ವಯಂ ಚಾಲಿತವಾಗಿ ಕಂದಾಯ ಇಲಾಖೆ ಸ್ಥಾಪಿಸಿರುವ ಕರ್ನಾಟಕ ನೋಂದಾಯಿತ ದಾಖಲೆ ಸಂಗ್ರಹಾಲಯ ಮತ್ತು ಡಿಜಿ ಲಾಕರ್ ನಲ್ಲಿ ಸೇವ್ ಆಗುತ್ತದೆ. ಈ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅಥವಾ ಮುದ್ರಿಸಲು ವಿಶಿಷ್ಟ ದಾಖಲೆ ಸಂಖ್ಯೆ ನೀಡಲಾಗುವುದು. ಅಧಿಕೃತ ಮತ್ತು ಕಾನೂನು ಬದ್ಧವಾಗಿ ಮಾನ್ಯವಾದ ನೋಂದಾಯಿತ ದಾಖಲೆಯಾಗುತ್ತದೆ.
ಇದರಿಂದ ಕಳ್ಳತನದ ಭಯ ಇರುವುದಿಲ್ಲ. ಆಸ್ತಿ ದಾಖಲೆ ತಿರುಚಿ ಬೇರೆಯವರಿಗೆ ಮಾರಾಟ ಮಾಡುವವರಿಗೆ ತಡೆ ಬೀಳಲಿದೆ. ಭೌತಿಕ ದಾಖಲೆ ಇಲ್ಲದಿರುವುದರಿಂದ ಕಾಗದ ಪತ್ರಗಳನ್ನು ಸಂಗ್ರಹಿಸುವ ಅವಶ್ಯಕತೆ ಇರುವುದಿಲ್ಲ. ಎಲ್ಲಿ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.

