ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತನೊಬ್ಬನ ಮೇಲೆ ದಳಿ ನಡೆಸಿ, ಆತನನ್ನು ಕೊಂದು ತಿಂದು ತೇಗಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದ ಭಕ್ತರ ಮೇಲೆ ಚಿರತೆ ನಡೆಸಿತ್ತು. ಈ ವೇಳೆ ಮಂಡ್ಯದ ಚೀರನಹಳ್ಳಿ ಮೂಲದ ಪ್ರವೀಣ್ ಎಂಬ ಭಕ್ತನ ಮೇಲೆ ದಾಳಿ ನಡೆಸಿದ್ದ ಚಿರತೆ ಕತ್ತು ಸೀಳಿ ಕೊಂದು ಹೊತ್ತೊಯ್ದಿತ್ತು. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ ಹಾಗೂ ಅಲ್ಲಲ್ಲಿ ಬೋನುಗಳನ್ನಿಟ್ಟು ಚಿರತೆ ಸೆರೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿತ್ತು.
ಡ್ರೋನ್ ಕಣ್ಗಾವಲಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಮಲೆ ,ಮಹದೇಶ್ವರ ಬೆಟ್ಟ ವನ್ಯಜಿವಿ ಅಭಯಾರಣ್ಯದಲ್ಲಿ ಇಳಿಜಾರು ಪ್ರದೇಶದಲ್ಲಿ ತಡರಾತ್ರಿ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಪಾದಯಾತ್ರೆ ಮೂಲಕ ಸಾಗುತ್ತಿದ್ದ ಪ್ರವೀಣ್ ಮೇಲೆ ಚಿರತೆ ದಾಳಿ ನಡೆಸಿತ್ತು. ದೇವಾಲಯದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ದಟ್ಟ ಅರಣ್ಯದಲ್ಲಿ ಈ ದಾಳಿ ನಡೆದಿತ್ತು. ಚಿರತೆ ದಾಳಿ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆಗಳ ಮೇಲೆ ನಿರ್ಬಂಧ ವಿಧಿಸಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಾದಯಾತ್ರೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

