ಮಂಗಳೂರು: ಪುತ್ತೂರು ನಗರದ ವಿವೇಕಾನಂದ ಕಾಲೇಜ್ ನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗಲು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಪ್ರಸಾದ್ ಬೋಟ್ಯಾಡಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಜನವರಿ 12ರಂದು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ, ಅದನ್ನು ಪ್ರಸಾರ ಮಾಡಿದ ವಿಕಸನ ಯೂಟ್ಯೂಬ್ ಚಾನಲ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಜನವರಿ 21ರಂದು ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಜನವರಿ 27ರಂದು ಪುತ್ತೂರು ನಗರ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಲಕ್ಷ್ಮಿ ಪ್ರಸಾದ್ ಬೋಟ್ಯಾಡಿಯವರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

