ಬೆಳಗಾವಿ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂದು ಪತ್ನಿ ಕಾಟ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಹಾಶಯನೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಬಲಹೊಂಗಲದಲ್ಲಿ ನಡೆದಿದೆ.
ಇಲ್ಲಿನ ನೇಗಿನಹಾಳ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ಕೊಲೆಗೈದು ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ಕಥೆ ಕಟ್ಟಿದ್ದಾನೆ ಪತಿ. ರಾಜೇಶ್ವರಿ (21) ಕೊಲೆಯಾದ ಮಹಿಳೆ. ಫಕೀರಪ್ಪ ಗಿಲಕ್ಕನವರ್ ಪತ್ನಿಯನ್ನೇ ಕೊಂದ ಪತಿ.
ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಅಳಿಕ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾನೆ. ಅಂತ್ಯಸಂಸ್ಕಾರದ ವೇಳೆ ರಾಜೇಶ್ವರಿ ಪೋಷಕರಿಗೆ ಅನುಮಾನ ಬಂದಿದೆ. ಮೃತದೇಹದ ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಇದರಿಂದ ಮಗಳನ್ನು ಅಳಿಯನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಕ್ಷಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಾಕಮಿಸಿದ ಪೊಲೀಸರು ಆರೋಪಿ ಫಕೀರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಪತ್ನಿಯನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿಯೂ ಕೊಲೆ ಎಂಬುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿರುವ ಬೈಲಹೊಂಗಲ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

