HomeIndiaಮದುವೆ ಬಳಿಕ ಜೊತೆ ಇದ್ದಿದ್ದು 65 ದಿನ, 13 ವರ್ಷ ಕೋರ್ಟ್‌ನಲ್ಲಿ ಹೋರಾಟ: ಸುಪ್ರೀಂ ಹೇಳಿದ್ದೇನು?

ಮದುವೆ ಬಳಿಕ ಜೊತೆ ಇದ್ದಿದ್ದು 65 ದಿನ, 13 ವರ್ಷ ಕೋರ್ಟ್‌ನಲ್ಲಿ ಹೋರಾಟ: ಸುಪ್ರೀಂ ಹೇಳಿದ್ದೇನು?

ಸುಪ್ರೀಂಕೋರ್ಟ್ ವಿವಾಹವೊಂದನ್ನು ರದ್ದುಗೊಳಿಸಿ ದಂಪತಿಗಳ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ. ಅಲ್ಲದೇ ಪರಸ್ಪರರ ವಿರುದ್ಧ ಇನ್ನೂ ಯಾವುದೇ ಕೇಸುಗಳನ್ನು ದಾಖಲಿಸುವಂತಿಲ್ಲ ಎಂದು ದಂಡ ವಿಧಿಸಿ, ಖಡಕ್ ಎಚ್ಚರಿಕೆ ಕೊಟ್ಟಿದೆ. ಈ ದಂಪತಿ ವಿವಾಹವಾದ ಬಳಿಕ ಒಟ್ಟಿಗೆ ಇದ್ದಿದ್ದು ಕೇವಲ 65 ದಿನ. ಆದರೆ ಪರಸ್ಪರರ ವಿರುದ್ದ 40ಕ್ಕೂ ಹೆಚ್ಚು ಕೇಸುಗಳನ್ನು ದಾಖಲಿಸಿಕೊಂಡು 13 ವರ್ಷಗಳಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದರು.

ಈ ಕೇಸು ಸುಪ್ರೀಂಕೋರ್ಟ್‌ ಅಂಗಳಕ್ಕೆ ಬಂದಾಗ ದಂಪತಿಗಳ ವಿರುದ್ಧ ಕೋರ್ಟ್ ತೀವ್ರವಾದ ಟೀಕೆಗಳನ್ನು ಮಾಡಿತು. ಸಂವಿಧಾನದ ವಿಧಿ 142ರ ಅನ್ವಯ ನ್ಯಾಯಾಲಯವು  ವಿವಾಹದನ್ನು ರದ್ದುಗೊಳಿಸಿತು. ಪತಿ, ಪತ್ನಿ ಇಬ್ಬರಿಗೂ ರೂ.10,000 ದಂಡವನ್ನು ವಿಧಿಸಿತು ಮತ್ತು ಭವಿಷ್ಯದಲ್ಲಿ ಯಾವುದೇ ಕಡೆಯವರು ಇನ್ನೊಬ್ಬರ ವಿರುದ್ಧ ಯಾವುದೇ ಹೊಸ ಪ್ರಕರಣ ದಾಖಲಿಸಬಾರದು ಎಂದು ಸೂಚನೆ ನೀಡಿತು.

ಏನಿದು ಅಚ್ಚರಿಯ ಪ್ರಕರಣ?: ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ನ್ಯಾಯಾಲಯದ ಉದ್ದೇಶ ವಿವಾದಗಳನ್ನು ಪರಿಹರಿಸುವುದಾಗಿದೆ. ವೈಯಕ್ತಿಕ ಹಿತಾಸಕ್ತಿ, ಪ್ರತೀಕಾರಕ್ಕೆ ಇದು ವೇದಿಕೆಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇಂತಹ ಪ್ರಕರಣಗಳು ನ್ಯಾಯಾಂಗದ ಸಮಯ ಮತ್ತು ಸಂಪನ್ಮೂಲಗಳ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಿಯಂತ್ರಿತ ವೈವಾಹಿಕ ಮೊಕದ್ದಮೆಗಳು ನ್ಯಾಯ ವಿತರಣಾ ವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಪತಿ, ಪತ್ನಿ ಇಬ್ಬರು ಕೇವಲ 65 ದಿನಗಳ ಕಾಲ ಒಟ್ಟಿಗೆ ವಾಸಿಸಿದ್ದಾರೆ. ನಂತರ ಅವರು ದಶಕಗಳ ಕಾಲ ಅನೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿಕೊಂಡು ಕಾನೂನು ಹೋರಾಟ ಮಾಡಿದ್ದಾರೆ. ಇದು ಕಾನೂನು ಹೋರಾಟವಲ್ಲ ಕಾನೂನು ಪ್ರಕ್ರಿಯೆಯ ಮೂಲಕ ಪರಸ್ಪರರಿಗೆ ಕಿರುಕುಳ ನೀಡುವುದಾಗಿದೆ. ಇಂತಹ ಪ್ರಕರಣಗಳು ನ್ಯಾಯಾಲಯ ಸಮಯ ವ್ಯರ್ಥ ಮಾಡುತ್ತಿವೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ವೈವಾಹಿಕ ಕಲಹವು ಕ್ರಿಮಿನಲ್ ಪ್ರಕರಣಗಳಾಗಿ ಕೋರ್ಟ್‌ಗೆ ಬರುತ್ತವೆ. ಸಂಬಂಧಿತ ಪಕ್ಷಗಳು ನ್ಯಾಯಾಲಯಕ್ಕೆ ಇದನ್ನು ತರುವ ಮೊದಲು ವಿವಾದಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವ ಜವಾಬ್ದಾರಿಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ವೈವಾಹಿಕ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಇವು ನ್ಯಾಯಾಲಯಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಿದೆ ಎಂದು ಕೋರ್ಟ್ ಹೇಳಿದೆ.

ಈ ಪ್ರಕರಣದಲ್ಲಿ ದಂಪತಿಗಳು ಜನವರಿ 2012ರಲ್ಲಿ ವಿವಾಹವಾದರು. ಮದುವೆಯಾಗಿ ಸುಮಾರು 65 ದಿನಗಳ ನಂತರ, ಪತ್ನಿ ಪತಿಯ ಮನೆಯನ್ನು ತೊರೆದು ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕ್ರೌರ್ಯದ ಆರೋಪಗಳನ್ನು ಮಾಡಿದರು. ನಂತರ ಇಬ್ಬರು ಬೇರೆ-ಬೇರೆಯಾಗಿ ಬದುಕಲು ಪ್ರಾರಂಭಿಸಿದರು.

ದೆಹಲಿ ಮತ್ತು ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯ, ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ನಲ್ಲಿ ಪರಸ್ಪರರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲು ಮಾಡಿದರು. ಈ ಪ್ರಕರಣಗಳ ವಿಲೇವಾರಿ ಸುಮಾರು 13 ವರ್ಷಗಳ ಕಾಲ ಮುಂದುವರೆಯಿತು.

ವಿಧಿ 142ರ ಅಡಿಯಲ್ಲಿ ಹಸ್ತಕ್ಷೇಪ ಮಾಡುವುದು ಅಗತ್ಯ ಮತ್ತು ನ್ಯಾಯಸಮ್ಮತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ ವಿವಾಹವನ್ನು ರದ್ದುಗೊಳಿಸಿ ಪತಿ, ಪತ್ನಿ ಇಬ್ಬರಿಗೂ ದಂಡವನ್ನು ವಿಧಿಸಿದೆ. ದಂಡವನ್ನು ಸುಪ್ರೀಂಕೋರ್ಟ್‌ಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಠೇವಣಿ ಇಡಬೇಕೆಂದು ನಿರ್ದೇಶಿಸಿದ ನ್ಯಾಯಾಲಯವು ಮುಂದೆ ಇಬ್ಬರು ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಆದೇಶಿಸಿದೆ.

ಈ ಆದೇಶವನ್ನು ಹೆಚ್ಚುತ್ತಿರುವ ವೈವಾಹಿಕ ದಾವೆಗಳ ವಿರುದ್ಧದ ಸ್ಪಷ್ಟ ಮತ್ತು ಕಠಿಣ ಸಂಕೇತವಾಗಿ ನೋಡಲಾಗುತ್ತಿದೆ. ನ್ಯಾಯಾಲಯಗಳು ಯಾವುದೇ ಸಂದರ್ಭದಲ್ಲೂ ವೈಯಕ್ತಿಕ ಹಿತಾಸಕ್ತಿಗೆ ವೇದಿಕೆಯಾಗಬಾರದು ಎಂದು ಕೋರ್ಟ್ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular