ಚೆನ್ನೈ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಬಿಐ, ತಮಿಳು ನಟ, ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಸಿಬಿಐ ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್ ಗೆ 2 ನೇ ಬಾರಿ ಸಮನ್ಸ್ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಟ ವಿಜಯ್ ಚೆನ್ನೈ ಏರ್ ಪೋರ್ಟ್ ಮೂಲಕವಾಗಿ ದೆಹಲಿಗೆ ತೆರಳಿದ್ದಾರೆ.
ಜನವರಿ 19ರಂದು ನಟ ವಿಜಯ್ ದೆಹಲಿಯ ಸಿಬಿಐ ಕಚೇರಿಯಲ್ಲಿ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಅಜಯ್ ರಸ್ತೋಗಿ ನೇತೃತ್ವದ ಸಮಿತಿಯು ಕೇಂದ್ರ ತನಿಖಾ ದಳದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ.
ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಜನವರಿ 12 ರಂದು ದಳಪತಿ ವಿಜಯ್ ಸಿಬಿಐ ವಿಚಾರಣೆ ಎದುರಿಸಿದ್ದರು. ಕಳೆದ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ ಆಯೋಜಿಸಿದ್ದ ರಾಜಕೀಯ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ, 40 ಜನರು ಮೃತಪಟ್ಟಿದ್ದರು. 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸುಪ್ರೀಂಮ್ಕೋರ್ಟ್ ಸಿಬಿಐಗೆ ವಹಿಸಿ ಆದೇಶ ಹೊರಡಿಸಿದೆ.

