ಕಲಬುರಗಿ: ಕಲಬುರಗಿ ಜಿಲ್ಲೆ ಕಮಲಾಪುರ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಥಮ ದರ್ಜೆ ಸಹಾಯಕ ಶಶಿಕಾಂತ್ ಜಂಜೀರ್ ಲೋಕಾಯುಕ್ತ ಬಲೆಗೆ ಬಿದ್ದ ನೌಕರ. ತಹಶೀಲ್ದಾರ್ ನಡೆಸಿದ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆದೇಶ ಪ್ರತಿಯನ್ನು ಫಲಾನುಭವಿಗಳಿಗೆ ನೀಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಒತ್ತಾಯಿಸುತ್ತಿದ್ದರಿಂದ ಕಿಶನ್ ರಾಥೋಡ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

