HomeLatest News‘ಬೆಂಗಳೂರು ಹಬ್ಬ’ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ಧರಾಮಯ್ಯ

‘ಬೆಂಗಳೂರು ಹಬ್ಬ’ ಎಲ್ಲರನ್ನೂ ಒಂದುಗೂಡಿಸಲಿ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಬೆಂಗಳೂರು ಹಬ್ಬದಲ್ಲಿ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದ್ದು, ಬೆಂಗಳೂರಿನ ನಾಗರಿಕರಿಗೆ ಇದೊಂದು ಸುಸಂದರ್ಭ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜಿಸಿದ್ದ “ಬೆಂಗಳೂರು ಹಬ್ಬ 2026 ಅನ್ನು ಉದ್ಘಾಟಿಸಿ, ಜನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಮತ್ತು ಯುವ ಜನಾಂಗಕ್ಕೆ ತಲುಪಿಸುವುದು ಇದರ ಉದ್ದೇಶ. ಎಲ್ಲ ಊರುಗಳಲ್ಲಿ ಹಮ್ಮಿಕೊಳ್ಳುವ ಜಾತ್ರೆ, ಉತ್ಸವಗಳು ಜಾತಿ, ಧರ್ಮಗಳನ್ನು ಮರೆತು ಮನುಷ್ಯರಾಗಬೇಕು ಎನ್ನುವ ಸಂದೇಶವನ್ನು ಸಾರುತ್ತದೆ. ಮನುಷ್ಯರು ಪರಸ್ಪರ  ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಯಾವುದೇ ಧರ್ಮವು ದ್ವೇಷಿಸಲು ಹೇಳುವುದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡ ನಾಡಿನಲ್ಲಿ ಬಸವಣ್ಣ, ಕನಕದಾಸರು, ನಾರಾಯಣಗುರುಗಳು ಸೇರಿದಂತೆ ಅನೇಕರು ಬಾಳಿ ಹೋಗಿದ್ದಾರೆ. ಇವರೆಲ್ಲರೂ ನಾವೆಲ್ಲ ಮನುಷ್ಯರೇ ಎಂದು ಸಾರಿ ಸಾರಿ ಹೇಳಿದವರು. ಬಸವಣ್ಣ ಜಾತಿ, ಧರ್ಮ, ವರ್ಗ, ಕಂದಾಚಾರ, ಮೌಢ್ಯಗಳು ತೊಲಗಬೇಕು ಎಂದು ಕರೆ ನೀಡಿದ್ದರು. ಹುಟ್ಟು ಮತ್ತು ಸಾವು ಇವೆರಡರ ಮಧ್ಯೆ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯ. ಏನು ಸಾಧಿಸಿದೆವು, ಸಮಾಜಕ್ಕೆ ಏನು ಬಿಟ್ಟುಹೋಗಿದ್ದೇವೆ ಎನ್ನುವುದು ಮುಖ್ಯ. ಬೇರೆಯವರು ಅನುಸರಿಸುವ ರೀತಿಯಲ್ಲಿ ನಮ್ಮ ಹೆಜ್ಜೆ ಗುರುತುಗಳು ಇರಬೇಕೇ ಹೊರತು, ಅದನ್ನು ವಿರೋಧಿಸುವಂತಿರಬಾರದು ಎಂದರು.

ಭವ್ಯವಾದ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ನಾವು ಮರೆಯಬಾರದು. ನಾವೆಲ್ಲರೂ ಒಂದೇ ಎಂದು ಬಾಳಬೇಕಿರುವುದು ಅವಶ್ಯ. ಪದ್ಮಿನಿ ರವಿ ಹಾಗೂ ನಂದಿನಿ ಆಳ್ವ ಅವರು ಪ್ರಾರಂಭಿಸಿದ ಬೆಂಗಳೂರು ಹಬ್ಬವನ್ನು ರವಿಚಂದರ್ ಮತ್ತು ಪ್ರಶಾಂತ್ ಪ್ರಕಾಶ್ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ನಾಡಿನವರು ಕನ್ನಡ ಭಾಷೆಯನ್ನು ಕಲಿಯಬೇಕು. ಕನ್ನಡವನ್ನು ವ್ಯಾವಹಾರಿಕ ಭಾಷೆಯನ್ನಾಗಿಸಬೇಕು ಹಾಗೂ ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ. ಯಾವುದೇ ರಾಜ್ಯದಿಂದ ಜನ ವಾಸಿಸಲು ಬಂದರೂ ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು ಎಂದರು.

ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಕನ್ನಡತನವನ್ನು ಬೆಳೆಸೋಣ. ಬೆಂಗಳೂರು ಹಬ್ಬ ಎಲ್ಲರನ್ನೂ ಒಂದುಗೂಡಿಸಲಿ ಎಂದು ಹಾರೈಸುತ್ತೇನೆ. ಬೆಂಗಳೂರಿನಲ್ಲಿ 1.40 ಕೋಟಿ ಜನ ನೆಲೆಸಿದ್ದಾರೆ. ನಾವೆಲ್ಲರೂ ಒಂದಾಗಿ ಬಾಳೋಣ, ಮನುಷ್ಯರಾಗೋಣ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಚಲನಚಿತ್ರ ನಟ ಶಿವರಾಜ್ ಕುಮಾರ್, ಹಿರಿಯ ನಟಿ ಜಯಮಾಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಆದ ಕೆ.ಗೋವಿಂದರಾಜು ಸೇರಿದಂತೆ ನಾಡಿನ ಹಲವು ಗಣ್ಯರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular