ಬೆಂಗಳೂರು : ಜಾನಪದ ಕ್ರೀಡೆಗಳಾದ ಕಂಬಳ,ಕುಸ್ತಿ , ಆಟ್ಯಾ ಪಾಟ್ಯ ಇತ್ಯಾದಿ ಕ್ರೀಡೆಗಳಲ್ಲಿ ಕೀರ್ತಿ ಗಳಿಸಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ರಾಜ್ಯದಲ್ಲಿ ಗ್ರಾಮೀಣ ಕ್ರೀಡೆಯ ಅಭಿವೃದ್ಧಿಗಾಗಿ ಸ್ಥಳೀಯ ಮತ್ತು ಪಾರಂಪರಿಕೆ ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಲು ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು.
ಬದಲಾದ ಕಾಲಮಾನಕ್ಕೆ ತಕ್ಕಂತೆ ಸದರಿ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಅಗತ್ಯವಿದ್ದು ಪ್ರಸ್ತುತ ಆರ್ಥಿಕ ಸ್ಥಿತಿಗತಿ ರಾಜ್ಯದ ಕ್ರೀಡಾ ಸಾಧನೆಯ ಬೆಳವಣಿಗೆ ಇತ್ಯಾದಿ ಅಂಶಗಳ ಹಿನ್ನಲೆಯಲ್ಲಿ ಮೇಲೆ(2)ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರು ಸದರಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲ್ಕಂಡ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದಲ್ಲಿ, ಗ್ರಾಮೀಣ ಕ್ರೀಡೆಯ ಅಭಿವೃದ್ಧಿಗಾಗಿ ಸ್ಥಳೀಯ ಮತ್ತು ಪಾರಂಪರಿಕೆ ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಲು ನೀಡಲಾಗುವ “ಕರ್ನಾಟಕ ಕ್ರೀಡಾರತ್ನ” ಪ್ರಶಸ್ತಿಗೆ ಸಂಬಂಧಿಸಿದಂತೆ ಓದಲಾದ ಆದೇಶದಲ್ಲಿ ರೂಪಿಸಲಾದ ಮಾರ್ಗಸೂಚಿ/ಪರಿಶೀಲನಾ ಸಮಿತಿ/ಆಯ್ಕೆ ಸಮಿತಿ/ಕ್ರೀಡಗಳ ಪಟ್ಟಿ ಮತ್ತು ಅಂಕಪಟ್ಟಿಯನ್ನು ರುಪಡಿಸಿ ಈ ಆದೇಶದ ಅನುಬಂಧ 1ರಲ್ಲಿರುವ ಪರಿಷ್ಕೃತ ಮಾರ್ಗಸೂಚಿ/ಪರಿಶೀಲನಾ ಸಮಿತಿ/ಆಯ್ಕೆ ಸಮಿತಿಗೆ ಸರ್ಕಾರದ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಪ್ರಸ್ತಾವನೆ:
ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಉದ್ದೇಶ:
ರಾಜ್ಯದಲ್ಲಿ ಗ್ರಾಮೀಣ ಕ್ರೀಡೆಯ ಅಭಿವೃದ್ಧಿಗಾಗಿ ಸ್ಥಳೀಯ ಮತ್ತು ಪಾರಂಪರಿಕ ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುವುದು.
ಪರಿಭಾಷೆ:
ಈ ಮಾರ್ಗಸೂಚಿಗಳಲ್ಲಿ ಸಂದರ್ಭ ಅನ್ಯತಾ ಅಗತ್ಯಪಡಿಸಿದ ಹೊರತು
ಅ) ಕ್ರೀಡೆ: ಅನುಬಂಧ-2ರಲ್ಲಿ ಕಾಣಿಸಿರುವ ಕ್ರೀಡೆಗಳು
ಆ) ಸರ್ಕಾರ: ಕರ್ನಾಟಕ ಸರ್ಕಾರ
ಇ) ಇಲಾಖೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಈ) ವರ್ಷ: ಕ್ಯಾಲೆಂಡರ್ ವರ್ಷ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ
ಉ) ಪ್ರಶಸ್ತಿ: ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
ಊ) ಸಮಿತಿ ಕರ್ನಾಟಕ ಕ್ರೀಡಾ ರತ್ನ ಆಯ್ಕೆ ಸಮಿತಿ/ಪರಿಶೀಲನಾ ಸಮಿತಿ
ಅರ್ಜಿ ಸ್ವೀಕಾರ:
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಈ ಕೆಳಕಾಣಿಸಿದ ಇಲಾಖೆ, ಸಂಘ-ಸಂಸ್ಥೆಗಳ ಮೂಲಕ ಅರ್ಜಿ ಸ್ವೀಕರಿಸಲಾಗುವುದು
ಅ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಆ) ಕ್ರೀಡಾ ಸಂಘ/ ಸಂಸ್ಥೆಗಳು
ಸೂಚನೆಗಳು
ಈ ಹಿಂದೆ ಏಕಲವ್ಯ ಪ್ರಶಸ್ತಿಗಳನ್ನು ಪಡೆದವರು ಈ ಪ್ರಶಸ್ತಿಯನ್ನು ಪಡೆಯಲು ಅರ್ಹರಿರುವುದಿಲ್ಲ.
ಕರ್ನಾಟಕ ನಿವಾಸಿಗಳಲ್ಲದ ಹಾಗೂ ರಾಜ್ಯವನ್ನು ಪ್ರತಿನಿಧಿಸದೇ ಇರುವ ಕ್ರೀಡಾಪಟುಗಳು ಈ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.
ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಬಗ್ಗೆ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಪ್ರಶಸ್ತಿ: ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯು ಪ್ರಮಾಣ ಪತ್ರ, ಶಾಲು, (ಪುರುಷರಿಗೆ ಪ್ಯಾಂಟು, ಶರ್ಟು, ಟೈ ಬ್ರೇಜರ್. ಶೂ ಮತ್ತು ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ, ಬ್ರೇಜರ್, ಚಪ್ಪಲ್, ಸೋಲ್. ನಗದು ಬಹುಮಾನ- ರೂ 2,00,000/- ಗಳನ್ನು ಒಳಗೊಂಡಿರುತ್ತದೆ.
ಕ್ರೀಡಾಪಟು ಅರ್ಜಿಸಲ್ಲಿಸಿದ ನಂತರ ಮರಣ ಹೊಂದಿದಲ್ಲಿ ಆ ಕ್ರೀಡಾಪಟು ಪ್ರಶಸ್ತಿಗೆ ಅರ್ಹರಾಗಿದ್ದಲ್ಲಿ ಮರಣೋತ್ತರ ಪ್ರಶಸ್ತಿಗೆ ಪರಿಗಣಿಸಲಾಗುವುದು.
ಅನರ್ಹತೆ: ನೀಡಲಾದ ದಾಖಲೆಗಳಲ್ಲಿ ತಪ್ಪು ಮಾಹಿತಿ ನೀಡಿರುವುದು ಗಮನಕ್ಕೆ ಬಂದಲ್ಲಿ ಅಂತಹ ಅರ್ಜಿಗಳನ್ನು ಅನರ್ಹಗೊಳಿಸಲಾಗುವುದು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪ್ರಶಸ್ತಿಯನ್ನು ರದ್ದುಗೊಳಿಸುವುದು:- ಸರ್ಕಾರವು ನೀಡಲಾದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಈ ಕೆಳಕಂಡ ಕಾರಣಗಳಿಗಾಗಿ ರದ್ದುಗೊಳಿಸಬಹುದಾಗಿರುತ್ತದೆ.
1) ಸುಳ್ಳು (ನಕಲಿ) ಪ್ರಮಾಣ ಪತ್ರ ಸಲ್ಲಿಸಿರುವುದು ದೃಢಪಟ್ಟಲ್ಲಿ.
2)ಪ್ರಶಸ್ತಿ ನೀಡಿದ ನಂತರದಲ್ಲಿ ಯಾವುದೇ ಮೂಲಗಳಿಂದ ಮಾಹಿತಿ ದೊರಕಿ ವಿಚಾರಣೆ/ತನಿಖೆಗೆ ಒಳಪಟ್ಟು ಸಲ್ಲಿಸಿದ ದಾಖಲೆಗಳು ತಪ್ಪೆಂದು ತಿಳಿದುಬಂದಲ್ಲಿ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಲಾಗುವುದು ಹಾಗೂ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಿರುವ ಕ್ರೀಡಾಪಟುಗಳು ಈ ಪ್ರಶಸ್ತಿಯ ನೀತಿ ನಿಯಮಗಳನ್ನು ಒಪ್ಪಿಕೊಳ್ಳತಕ್ಕದ್ದು.
ಪ್ರಶಸ್ತಿಯ ಸಂಖ್ಯೆ: ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಪುರುಷ ಹಾಗೂ ಮಹಿಳೆಯರು ಮತ್ತು ಓರ್ವ ವಿಕಲಚೇತನ ಕ್ರೀಡಾಪಟು ಸೇರಿದಂತೆ ಪ್ರತಿ ಕ್ರೀಡೆಗೆ ಒಂದರಂತೆ (ವಿಶಿಷ್ಟ ಕ್ರೀಡೆಗಳಲ್ಲಿ ವರ್ಷಕ್ಕೆ 3 ಪ್ರಶಸಿ) 15 ಕ್ರೀಡಾಪಟುಗಳಿಗೆ ಮಾತ್ರ ಪ್ರಶಸ್ತಿಯನ್ನು ನೀಡತಕ್ಕದ್ದು.
ಖೋ-ಖೋ, ಥೋಬಾಲ್, ಕಬಡ್ಡಿ, ಆಟ್ಯಾ ಪಾಟ್ನಾ, ಮಲ್ಲಕಂಬ, ಮಟ್ಟಿ ಕುಸ್ತಿ/ಜಂಗಿ ಕುಸ್ತಿ ಕ್ರೀಡೆಗಳಿಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಪರಿಗಣಿಸಲಾಗುವುದು.









