ಬೆಂಗಳೂರು: ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ(ICFRE) ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಅಕ್ರಮ ಮಾರ್ಗದಲ್ಲಿ ಕೆಲಸ ಪಡೆದು ವರ್ಷಗಳ ಕಾಲ ವೇತನ ಪಡೆದಿದ್ದ ಏಳು ಮಂದಿ ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ.
ನೇಮಕಾತಿ ಪರೀಕ್ಷೆಯನ್ನು ಬೇರೆ ಅಭ್ಯರ್ಥಿಗಳ ಕೈಲಿ ಬರೆಸಿ ಹೆಚ್ಚಿನ ಅಂಕ ಪಡೆದು ಕೆಲಸಕ್ಕೆ ಸೇರಿದ ಏಳು ಮಂದಿಯ ಅಕ್ರಮವನ್ನು ಮಂಡಳಿಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಕಲಿ ದಾಖಲೆ ಸಲ್ಲಿಸಿ ವಂಚಿಸಿದ್ದ ನೌಕರರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದ್ದು, ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಆಗಿದ್ದ ಹರಿಯಾಣ ಮೂಲದ ದಿನೇಶ್(28), ಹೆಚ್.ಎನ್. ಸುಧೀರ್(29), ಪ್ರಿನ್ಸ್(29), ಸೋನು(37), ಪ್ರವೀಣ್(25), ಬಿಹಾರದ ರಾಜಕುಮಾರ್(25), ಅರಣ್ಯ ವೀಕ್ಷಕ ಸುನಿಲ್ ಕುಮಾರ್ ಯಾದವ್(33) ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನೇಶ್ 2019 ರಲ್ಲಿ ಎಂಟಿಎಸ್ ಆಗಿ ನೇಮಕವಾಗಿದ್ದರು. ಸುನಿಲ್ ಕುಮಾರ್ ಯಾದವ್ 2023ರಲ್ಲಿ ಕೆಲಸಕ್ಕೆ ಸೇರಿದ್ದರು. ಉಳಿದವರು 2022ರಲ್ಲಿ ನೇಮಕಾತಿಯಾಗಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಏಳು ಜನ ತಲೆಮರಿಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮಂಡಳಿಯಲ್ಲಿ ಎಂಟಿಎಸ್ ಹುದ್ದೆಗೆ ನೇಮಕವಾದವರ ದಾಖಲೆ ನೈಜತೆ ಪರಿಶೀಲಿಸಿದಾಗ ನಾಲ್ವರು ಸಲ್ಲಿಸಿದ್ದ ದಾಖಲೆಗಳು ನಕಲಿಯಾಗಿದ್ದವು. ನಾಲ್ವರು ಬೇರೆ ಹೆಸರಲ್ಲಿ ಬೇರೆಯವರು ಲಿಖಿತ ಪರೀಕ್ಷೆ ಬರೆದಿದ್ದ ವಿಚಾರವೂ ಬೆಳಕಿಗೆ ಬಂದಿತ್ತು. ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಾವಳಿ ಸಾಕ್ಷ್ಯವೂ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ ಸದಾಶಿವನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿ ವಂಚನೆ ಎಸಗಿದ್ದ ಬಿಹಾರ ಮೂಲದ ರೂಪೇಶ್ ಕುಮಾರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ನಂತರದಲ್ಲಿ ಮಂಡಳಿಯ ಕಾರ್ಯದರ್ಶಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಎಂಟಿಎಸ್ ಹಾಗೂ ಇತರ ಹುದ್ದೆಗಳಿಗೆ ನೇಮಕವಾದವರ ದಾಖಲೆ ಪರಿಶೀಲಿಸಲು ಸೂಚನೆ ನೀಡಿದ್ದರು. ಉದ್ಯೋಗಿಗಳ ಆಂತರಿಕ ತನಿಖೆ ನಡೆಸಿದಾಗ ದಿನೇಶ್, ಸುಧೀರ್, ಪ್ರಿನ್ಸ್, ಸೋನು, ಪ್ರವೀಣ್, ರಾಜಕುಮಾರ್, ಸುನಿಲ್ ಕುಮಾರ್ ಯಾದವ್ ದಾಖಲೆ, ಸಹಿ, ಉತ್ತರ ಪತ್ರಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು.

