ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಎರಡು ಎಫ್ ಐ ಆರ್ ದಾಖಲಾಗಿದೆ.
ಸಾಲು ಸಾಲು ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಲ್ಲಿರುವ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ. ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ ವಿಚಾರವಾಗಿ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿದ್ದ ರಾಜೀವ್ ಗೌಡ ಬಾಯಿಗೆ ಬಂದಂತೆ ಮಾತನಾಡಿದ್ದರು. ಅವಾಚ್ಯವಾಗಿ ನಿಂದಿಸಿ, ಜನರನ್ನು ಕಳುಹಿಸಿ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು.
ರಾಜಕೀಯ ಮುಖಂಡನ ದಬ್ಬಾಳಿಕೆ, ಬೆದರಿಕೆಗೆ ಕಂಗಾಲಾದ ಅಮೃತಾ ಕಣ್ಣೀರಿಟ್ಟಿದ್ದರು. ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೌರಾಯುಕ್ತೆ ದೂರುನ ಬಳಿಕ ಜೆಡಿಎಸ್ ಮುಖಂಡರು ಕೂಡ ರಾಜೀವ್ ಗೌಡ ವಿರುದ್ಧ ದೂರು ನೀಡಿದ್ದು, ರಾಜೀವ್ ಗೌಡ ವಿರುದ್ಧ ಎರಡು ಎಫ್ ಐ ಆರ್ ದಾಖಲಾಗಿದೆ.
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಂಧನ ಭೀತಿಯಲ್ಲಿರುವ ರಾಜೀವ್ ಗೌಡ ನಾಪತ್ತೆಯಾಗಿದ್ದಾರೆ. ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಬೇಕು ಹಾಗೂ ತಕ್ಷಣ ಬಂಧಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.

