ನವದೆಹಲಿ: ದೇಶದಲ್ಲಿ 18 ಸಾವಿರಕ್ಕೂ ಅಧಿಕ ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಖಾಲಿ ಉಳಿದಿದೆ. ಹೀಗಾಗಿ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ(NBEMS) ನೀಟ್ ಪಿಜಿ 2025ರ ಪ್ರವೇಶಕ್ಕೆ ಅರ್ಹತಾ ಮಾನದಂಡ ಪರ್ಸೆಂಟೈಲ್ ಪರಿಷ್ಕರಣೆ ಮಾಡಿದೆ.
ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಪರ್ಸೆಂಟೈಲ್ 40 ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪರ್ಸೆಂಟೈಲ್ 50 ರಿಂದ 7ಕ್ಕೆ ಇಳಿಸಲಾಗಿದೆ.
ಎರಡನೇ ಸುತ್ತಿನ ಕೌನ್ಸಿಲಿಂಗ್ ಪೂರ್ಣಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯಕೀಯ ಸೀಟುಗಳನ್ನು ಖಾಲಿ ಬಿಟ್ಟರೆ ಆರೋಗ್ಯ ಸೇವೆ ಸುಧಾರಣೆ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ ತಜ್ಞ ವೈದ್ಯರ ಸಂಖ್ಯೆ ಹೆಚ್ಚಳ ಮಾಡಲು ಲಭ್ಯವಿರುವ ಸೀಟುಗಳ ಬಳಕೆ ಖಚಿತ ಪಡಿಸಿಕೊಳ್ಳಲು ಈ ಪರಿಷ್ಕರಣೆ ಮಾಡಲಾಗಿದೆ.
ಸೀಟು ವ್ಯರ್ಥವಾಗುವುದನ್ನು ತಡೆಯಲು ಮತ್ತು ಆರೋಗ್ಯ ಸೇವೆ ಬಲಪಡಿಸುವ ಅಗತ್ಯ ಉಲ್ಲೇಖಿಸಿ ಭಾರತೀಯ ವೈದ್ಯಕೀಯ ಸಂಘ ಜನವರಿ 12ರಂದು ಅರ್ಹತಾ ಕಟ್ ಆಫ್ ಪರಿಷ್ಕರಣೆ ಮಾಡಬೇಕೆಂದು ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

