ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 2,000 ಮಂದಿ ಮೃತಪಟ್ಟಿದ್ದಾರೆ. ಈಗ ಪ್ರತಿಭಟನೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಅಲ್ಲಿರುವ ಭಾರತೀಯರಿಗೆ ದೇಶ ತೊರೆಯುವಂತೆ ತುರ್ತು ಸಲಹೆ ನೀಡಲಾಗಿದೆ.
ಇರಾನ್ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಲಭ್ಯವಿರುವ ಸಾರಿಗೆ ಸೌಲಭ್ಯಗಳನ್ನು ಬಳಸಿಕೊಂಡು ತಕ್ಷಣವೇ ದೇಶವನ್ನು ತೊರೆಯುವಂತೆ ರಾಯಭಾರ ಕಚೇರಿಯು ಸೂಚಿಸಿದೆ.
“ಭಾರತ ಸರ್ಕಾರವು ಜನವರಿ 5, 2025ರಂದು ಹೊರಡಿಸಿದ ಮಾರ್ಗಸೂಚಿಯ ಮುಂದುವರಿದ ಭಾಗವಾಗಿ, ಇರಾನ್ನಲ್ಲಿ ಪ್ರಸ್ತುತ ಉದ್ಭವಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗುತ್ತಿದೆ” ಎಂದು ಪ್ರಕಟಣೆ ತಿಳಿಸಿದೆ.
“ಇರಾನ್ನಲ್ಲಿರುವ ಭಾರತೀಯ ನಾಗರಿಕರು (ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಗಳ ಮೂಲಕ ಇರಾನ್ ತೊರೆಯುವಂತೆ ಸಲಹೆ ನೀಡಲಾಗಿದೆ” ಎಂದು ಪ್ರಕಟಣೆ ಹೇಳಿದೆ.
ರಾಯಭಾರ ಕಚೇರಿಯು, “ಎಲ್ಲಾ ಭಾರತೀಯ ನಾಗರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು. ಪ್ರತಿಭಟನೆ ನಡೆಯುವ ಪ್ರದೇಶಗಳಿಂದ ದೂರವಿರಬೇಕು. ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಸ್ಥಳೀಯ ಬೆಳವಣಿಗೆಗಳಿಗಾಗಿ ಅಲ್ಲಿನ ಮಾಧ್ಯಮಗಳನ್ನು ಗಮನಿಸುತ್ತಿರಬೇಕು” ಎಂದು ಹೇಳಿದೆ.
“ಇರಾನ್ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ತಮ್ಮ ಪಾಸ್ಪೋರ್ಟ್ ಮತ್ತು ಗುರುತಿನ ಚೀಟಿಗಳು ಸೇರಿದಂತೆ ಅಗತ್ಯ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಸಹಾಯದ ಅಗತ್ಯವಿದ್ದಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ” ಎಂದು ತಿಳಿಸಲಾಗಿದೆ.
ತುರ್ತು ಸಂಪರ್ಕ ಸಂಖ್ಯೆಗಳು: ನೆರವಿಗಾಗಿ ಭಾರತೀಯ ರಾಯಭಾರ ಕಚೇರಿಯ ಈ ಕೆಳಗಿನ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
- ಮೊಬೈಲ್ ಸಂಖ್ಯೆಗಳು: +989128109115; +989128109109; +989128109102; +989932179359
- ಇಮೇಲ್: [email protected]
ಈ ತನಕ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದ ಭಾರತೀಯರು ತಕ್ಷಣವೇ ನೋಂದಾಯಿಸಿಕೊಳ್ಳುವಂತೆ ರಾಯಭಾರ ಕಚೇರಿಯು ಒತ್ತಾಯಿಸಿದೆ. ನೋಂದಣಿಗಾಗಿ ಈ ಲಿಂಕ್ ಅನ್ನು ಬಳಸಬಹುದು https://www.meaers.com/request/home.
ಈ ಲಿಂಕ್ ರಾಯಭಾರ ಕಚೇರಿಯ ಅಧಿಕೃತ ವೆಬ್ಸೈಟ್ನಲ್ಲೂ ಲಭ್ಯವಿದೆ. ಇರಾನ್ನಲ್ಲಿ ಇಂಟರ್ನೆಟ್ ವ್ಯತ್ಯಯದಿಂದಾಗಿ ಯಾವುದೇ ಭಾರತೀಯ ನಾಗರಿಕರಿಗೆ ನೋಂದಣಿ ಮಾಡಲು ಸಾಧ್ಯವಾಗದಿದ್ದಲ್ಲಿ, ಭಾರತದಲ್ಲಿರುವ ಅವರ ಕುಟುಂಬದವರು ಅವರ ಪರವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿನಂತಿಸಲಾಗಿದೆ.
ರಾಯಭಾರ ಕಚೇರಿಯ ಈ ಪ್ರಕಟಣೆಯ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ಇರಾನ್ನಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಭಾರತೀಯ ನಾಗರಿಕರು ಇರಾನ್ಗೆ ಪ್ರಯಾಣಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದೆ.

