ಸೋಲನ್: ಹಿಮಾಚಲ ಪ್ರದೇಶದ ಸೋಲನ್ ನ ಅರ್ಕಿ ಮಾರುಕಟ್ಟೆಯ ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಹಲವಾರು ಅಂಗಡಿಗಳು ಮತ್ತು ಕಟ್ಟಡಗಳು ನಾಶವಾಗಿದ್ದು, ಇನ್ನೂ ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮೃತರಲ್ಲಿ ಎಂಟು ವರ್ಷದ ಮಗುವೂ ಸೇರಿದ್ದು, ಬಿಹಾರದ ನಿವಾಸಿ ಪ್ರಿಯಾಂಶ್ ಎಂದು ಗುರುತಿಸಲಾಗಿದೆ. ಇತರರ ಹೆಸರು ತಿಳಿದುಬಂದಿಲ್ಲ. ಈವರೆಗೆ ಸ್ಥಳದಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ದೃಢಪಡಿಸಿದ್ದಾರೆ.
ಸೋಲನ್ ಉಪ ಆಯುಕ್ತ ಮನಮೋಹನ್ ಶರ್ಮಾ ಅವರು ಬೆಳಗಿನ ಜಾವ 2:45 ರ ಸುಮಾರಿಗೆ ಮರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೆರೆಯ ರಚನೆಗಳಿಗೆ ಬೆಂಕಿ ವೇಗವಾಗಿ ಹರಡಿದೆ ಎಂದು ತಿಳಿಸಿದ್ದಾರೆ. ಬೆಂಕಿಯ ನಿಖರವಾದ ಕಾರಣವನ್ನು ನಿರ್ಧರಿಸಲು ತನಿಖೆಗೆ ಆದೇಶಿಸಲಾಗಿದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಆದ್ಯತೆ ನೀಡುವಂತೆ ಉಪ ಆಯುಕ್ತರಿಗೆ ಸೂಚಿಸಿದ್ದಾರೆ.

