ಬೆಂಗಳೂರು: ಕನ್ನಡಿಗರಲ್ಲದವರು ಹೆಚ್ ಆರ್ ಹುದ್ದೆಯ ಕೆಲಸಕ್ಕೆ ಬೇಕೆಂದು ಪ್ರಕಟಣೆ ಹೊರಡಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕನ್ನಡಿಗರ ಕ್ಷಮೆಯಾಚಿಸಿದೆ.
ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಖಾಸಗಿ ಕಂಪನಿ ನಾನ್ ಕನ್ನಡಿಗರು ಹೆಚ್ ಆರ್ ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿತ್ತು. ಈ ಬಗ್ಗೆ ನೌಕ್ರಿ ಡಾಟ್ ಕಾಮ್ ವೆಬ್ ಸೈಟ್ ನಲ್ಲಿ ಕಂಪನಿ ಪ್ರಕಟಿಸಿತ್ತು. ಕರ್ನಾಟಕದಲ್ಲಿರುವ ಕಂಪನಿ ಕನ್ನಡಿಗರಲ್ಲದವರು ಕೆಲಸಕ್ಕೆ ಬೇಕೆಂದು ಪ್ರಕಟಿಸಿದ್ದು, ಕನ್ನಡಿಗರನ್ನು ಕೆರಳಿಸಿತ್ತು. ಕಂಪನಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಕನ್ನಡ ಪರ ಸಂಘಟನೆಗಳು ಕಂಪನಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹೋರಾಟದ ಎಚ್ಚರಿಕೆ ನೀಡಿದ್ದವು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಯೂರಿರುವ ಖಾಸಗಿ ಕಂಪನಿ ನಾನ್ ಕನ್ನಡಿಗರು ಬೇಕು ಎಂದು ಪ್ರಕಟಣೆ ಹೊರಡಿಸಿದ್ದು ತಪ್ಪು, ಕನ್ನಡ ನೆಲದಲ್ಲಿ ಕಂಪನಿ ತೆರೆದು ಈಗ ಕನ್ನಡಿಗರು ಬೇಡವೆನ್ನುವ ಕಂಪನಿ ಕರ್ನಾಟಕಕ್ಕೆ ಬೇಡ ಎಂಬ ಒತ್ತಾಯಗಳು ಕೇಳಿಬಂದಿದ್ದವು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಸ್ಕಿಲ್ ಸೋನಿಕ್ಸ್ ಕಂಪನಿ, ಕನ್ನಡಿಗರ ಕ್ಷಮೆ ಕೇಳಿದೆ. ಇದು ಬೆಂಗಳೂರಿನ ಬ್ರಾಂಚ್ ನಿಂದ ಹೊರಡಿಸಿದ ಪ್ರಕಟಣೆಯಲ್ಲ. ಕೋಲ್ಕತ್ತಾ ಬ್ರಾಂಚ್ ನಿಂದ ಹೊರಡಿಸಿದ ಪ್ರಕಟಣೆಯಾದ್ದರಿಂದ ತಪ್ಪಾಗಿದೆ. ಕನ್ನಡಿಗರಿಗೆ ನೋವಾಗಿದ್ದಕ್ಕೆ ಕ್ಷಮೆ ಇರಲಿ ಎಂದು ಕೇಳಿದೆ.

