ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರು-ಹೊಸೂರು ರಸ್ತೆಯಲ್ಲಿ ಏಕಾಏಕಿ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರು-ಹೊಸೂರು ರಸ್ತೆಯ ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು ನಾಲ್ಕೈದು ಕಿ.ಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ರಸ್ತೆಯಲ್ಲಿ ನಿಂತಲ್ಲೇ ನಿಂತಿವೆ. ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಇದರಿಂದಾಗಿ ಆಂಬುಲೆನ್ಸ್ ವೊಂದು ಮಾರ್ಗಮಧ್ಯೆ ಸಿಲುಕಿ ರೋಗಿಯೊಬ್ಬರು ನರಳಾಡಿದ್ದಾರೆ.
ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಆಂಬುಲೆನ್ಸ್ ಚಾಲಕ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ವಾಹನ ದಟ್ಟಣೆಯಿಂದ ಮುಂದೆ ಸಾಗಲು ಸಾಧ್ಯವಾಗಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕುಕಿ ಒದ್ದಾಡಿದ್ದಾರೆ.
ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದೇ ಪ್ರತಿದಿನ ಟ್ರಾಫಿಕ್ ಜಾಮ್ ಗೋಳಾಟಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸಾಗುವ ಸಾರ್ವಜನಿಕರು ಪ್ರತಿದಿನ ಇದೇ ಅವಸ್ಥೆ ಅನುಭವಿಸಬೇಕಾದ ಸ್ಥಿತಿಯಿದೆ.

