ಬಳ್ಳಾರಿ : ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಧಣಿ ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿ ಬಿಜೆಪಿಯ 33 ಮಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಜನಾರ್ಧನ ರೆಡ್ಡಿ, ಶ್ರೀರಾಮುಲು, ಸುರೇಶ್ ಬಾಬು, ಪ್ರಕಾಶ್ ರೆಡ್ಡಿ, ಸೇರಿ ಬಿಜೆಪಿಯ 33 ಜನರಿಗೆ ಪೊಲೀಸ್ ನೋಟಿಸ್ ನೀಡಲಾಗಿದೆ.
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ-ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಜನರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣದಲ್ಲಿ ಬಳ್ಳಾರಿ ಪೊಲೀಸರು ಮೂವರು ಖಾಸಗಿ ಗನ್ ಮ್ಯಾನ್ ಗಳು, 10 ಜನ ಕಾಂಗ್ರೆಸ್ ಕಾರ್ಯಕರ್ತರು,10 ಜನ ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟು 26 ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಶಾಸಕ ಜನಾರ್ಧನ ರೆಡ್ಡಿ ಅವರ ಮನೆಯ ಮುಂದೆ ಜ.01 ರಂದು ಬ್ಯಾನರ್ ಹರಿದ ವಿಚಾರವಾಗಿ ಭಾರಿ ಗಲಾಟೆ ನಡೆದಿತ್ತು. ಈ ವೇಳೆ ಫೈರಿಂಗ್ ಮಾಡಿದ ಪರಿಣಾಮ ಓರ್ವ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಬಲಿಯಾಗಿದ್ದರು.
ಸಾರ್ವಜನಿಕರಿಗೆ ಪೊಲೀಸ್ ಮನವಿ
ಗಲಾಟೆಯ ಕುರಿತು ರೆಕಾರ್ಡ್ ಮಾಡಿದ ದೃಶ್ಯಾವಳಿಗಳು ಇದ್ದಲ್ಲಿ ಸಾರ್ವಜನಿಕರು ಹೆಚ್ಚಿನ ತನಿಖೆಗಾಗಿ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.ನಗರದಲ್ಲಿ ಜ.01 ರಂದು ರಾತ್ರಿ 09 ಗಂಟೆಯಿಂದ 9.20 ಗಂಟೆಯ ಮಧ್ಯದ ಅವಧಿಯಲ್ಲಿ ಸಿರುಗುಪ್ಪ ರಸ್ತೆಯ ಹವಂಭಾವಿಯ ಜನಾರ್ಧನ ರೆಡ್ಡಿ ಅವರ ಜಾಗದ ಮುಂದೆ ಸಾರ್ವಜನಿಕರ ರಸ್ತೆಯಲ್ಲಿ ಹಾಕಿದ್ದ ಬ್ಯಾನರ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ರಸ್ತೆಯಲ್ಲಿ ಗಲಾಟೆ ಆಗಿ ರಾಜಶೇಖರ್ ರೆಡ್ಡಿ ಎನ್ನುವವರು ಕೊಲೆ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 01/2026 ಕಲಂ 103(1), 54, 352, 351(2) ಆಧಾರ 190 ಬಿ.ಎನ್.ಎಸ್-2023 ಹಾಗೂ ಕಲಂ 27 ಆರ್ಮ್ಸ್ ಆಕ್ಟ್-1959 ರಡಿ ಪ್ರಕರಣ ದಾಖಲಾಗಿರುತ್ತದೆ.
ಹಾಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ರೆಕಾರ್ಡಿಂಗ್ ಮಾಡಿದ್ದ ದೃಶ್ಯಾವಳಿಗಳು ಇದ್ದರೆ ಹೆಚ್ಚಿನ ತನಿಖೆಗಾಗಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವ್ಯಾಟ್ಸಪ್ ಸಂಖ್ಯೆ 9480803045 ನಂಬರ್ಗೆ ಕಳಿಸಬಹುದು ಅಥವಾ ಖುದ್ದಾಗಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

