ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಅಮೆರಿಕದ ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ನಡೆಸಿರುವ ಅಮೆರಿಕ ಕ್ರಮ ಖಂಡಿಸಿ ಈ ಪ್ರತಿಭಟನೆ ಆಯೋಜಿಸಲಾಗಿದೆ.
ಜನವರಿ 8ರ ಗುರುವಾರ ಸಂಜೆ 4 ಗಂಟೆಗೆ ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಎಡಪಕ್ಷಗಳು ಒಟ್ಟಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ವೆನೆಜುವೆಲಾ ಮೇಲೆ ಸಾಮ್ಯಾಜ್ಯಶಾಹಿ ಅಮೆರಿಕ ದಾಳಿ ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.
ಯುದ್ಧಕೋರ ಅಮೆರಿಕ ವೆನೆಜುವೆಲಾದಿಂದ ತೊಲಗು ಎಂಬ ಶೀರ್ಷಿಕೆಯಡಿ ಪ್ರತಿಭಟನೆ ನಡೆಯಲಿದೆ. ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ಎಸ್‌ಯುಸಿಐ (ಸಿ), ಎಐಎಫ್‌ಬಿ ಜಂಟಿಯಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ.
ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಅಮೆರಿಕದ ನೀತಿ ಖಂಡಿಸುವವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸೇನಾ ಕಾರ್ಯಾಚರಣೆ ನಡೆಸಿದ್ದ ಅಮೆರಿಕ: ವೆನೆಜುವೆಲಾ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದ ಅಮೆರಿಕದ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಬಂಧಿಸಿವೆ. ಈ ಕುರಿತು ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದರು.
ತೈಲ ಸಂಪತ್ತಿಗಾಗಿ ವೆನೆಜುವೆಲಾ ಮೇಲೆ ಅಕ್ರಮ ಕಾರ್ಯಾಚರಣೆ ಮಾಡಿದ ಅಮೆರಿಕದ ವಿರುದ್ಧ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಕ್ರೋಶ ವ್ಯಕ್ತವಾಗುತ್ತಿದೆ. ನಿಕೊಲಸ್ ಮಡೂರೊ ಬಂಧಿಸಿದ್ದ ಅಮೆರಿಕ ಅವರ ಕೈಗೆ ಕೋಳ ಹಾಕಿರುವ, ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿರುವ, ಕೈಯಲ್ಲಿ ಕುಡಿಯುವ ನೀರಿನ ಬಾಟಲ್ ಹಿಡಿದಿರುವ ಚಿತ್ರವನ್ನು ಬಿಡುಗಡೆ ಮಾಡಿತ್ತು.
ಅಮೆರಿಕ ಮಡುರೊ ವಿರುದ್ಧ ಮಾದಕ ದ್ರವ್ಯ, ಭಯೋತ್ಪಾದನಾ ಪಿತೂರಿ, ಕೊಕೇನ್ ಆಮದು ಪಿತೂರಿ, ಮಿಷಿನ್ ಗನ್ ಹಾಗೂ ವಿನಾಶಕಾರಿ ಸಾಧನಗಳನ್ನು ಹೊಂದಿರುವ ಪಿತೂರಿಗಳು ಸೇರಿ ಹಲವು ದೋಷಾರೋಪಗಳನ್ನ ಹೊರಿಸಿದೆ. ಆದರೆ ಈ ಕಾರ್ಯಾಚರಣೆ ನಡೆಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ನಿಕೊಲಸ್ ಮಡೂರೊ 2013ರಿಂದ ಸತತವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಆದರೆ ಟ್ರಂಪ್ ಇದನ್ನು ಪ್ರಶ್ನೆ ಮಾಡಿದ್ದಾರೆ. 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಅಧಿಕಾರದಿಂದ ನಿಕೊಲಸ್ ಮಡೂರೊ ಕೆಳಗಿಳಿಸಲು ಅಮೆರಿಕ ಪ್ರಯತ್ನ ಮಾಡುತ್ತಲೇ ಇತ್ತು. ದೇಶದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿದೆ. ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರಿತ್ತು. ಈಗ ಅವರನ್ನು ಬಂಧಿಸುವ ಮೂಲಕ ಅಮೆರಿಕ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ.

