HomeBusinessಕೇಂದ್ರ ಸರ್ಕಾರದಿಂದ ಮತ್ತೆ ಬ್ಯಾಂಕ್ ವಿಲೀನ?, ಶೀಘ್ರವೇ ಘೋಷಣೆ

ಕೇಂದ್ರ ಸರ್ಕಾರದಿಂದ ಮತ್ತೆ ಬ್ಯಾಂಕ್ ವಿಲೀನ?, ಶೀಘ್ರವೇ ಘೋಷಣೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪುನಃ ಬ್ಯಾಂಕುಗಳ ವಿಲೀನದತ್ತ ಗಮನ ಹರಿಸಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದ್ದು, ದೇಶದ ಎರಡು ಪ್ರತಿಷ್ಠಿತ ಬ್ಯಾಂಕುಗಳು ವಿಲೀನಗೊಳ್ಳಲಿವೆ.

ಇತ್ತೀಚಿನ ಬ್ಯಾಂಕಿಂಗ್ ಸುಧಾರಣೆಗಳ ಭಾಗವಾಗಿ ಈಗಾಗಲೇ 2017 ರಿಂದ 2020ರ ನಡುವೆ ಸರ್ಕಾರವು 10 ಬ್ಯಾಂಕ್‌ಗಳನ್ನು 4 ದೊಡ್ಡ ಸಂಸ್ಥೆಗಳಾಗಿ ವಿಲೀನಗೊಳಿಸಿದೆ. ಇದರಿಂದಾಗಿ ಸರ್ಕಾರಿ ಬ್ಯಾಂಕ್‌ಗಳ ಸಂಖ್ಯೆ 27 ರಿಂದ 12ಕ್ಕೆ ಇಳಿದಿದೆ.

ಈಗ ಮುಂಬೈ ಮೂಲದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳನ್ನು ವಿಲೀನಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ‘ಮಿಂಟ್’ ವರದಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಲೀನ ಯಶಸ್ವಿಯಾದರೆ ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯಾಚರಣೆ ಸುಗಮಗೊಳಿಸಲು ಮತ್ತು ಬ್ಯಾಂಕ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ವರದಿ ಹೇಳಿದೆ.

ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ ಎರಡನೇ ಸ್ಥಾನದಲ್ಲಿದ್ದು, ಹೊಸ ವಿಲೀನದ ನಂತರ ರೂ. 25.67 ಟ್ರಿಲಿಯನ್ ಆಸ್ತಿಯೊಂದಿಗೆ ಹೊಸ ಸಂಸ್ಥೆಯು ಐಸಿಐಸಿಐ ಬ್ಯಾಂಕ್‌ಗೆ ಸ್ಪರ್ಧೆ ನೀಡಲಿದೆ. ಯಾವಾಗ ವಿಲೀನದ ಘೋಷಣೆಯಾಗಲಿದೆ? ಎಂಬುದು ಖಚಿತವಾಗಿಲ್ಲ.

ವಿಲೀನದ ಬಳಿಕ ಮುಂದೇನು?: ಚೆನ್ನೈ ಮೂಲದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ವಿಲೀನದ ಬಗ್ಗೆಯೂ ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಇದೆ.

ಪಂಜಾಬ್ ಎಂಡ್ ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಗಳನ್ನು ಮುಂದಿನ ದಿನಗಳಲ್ಲಿ ಖಾಸಗೀಕರಣ ಮಾಡುವ ಸಾಧ್ಯತೆಯಿದೆ. ಸಣ್ಣ ಬ್ಯಾಂಕ್‌ಗಳನ್ನು ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಮೂಲಕ ಆರ್ಥಿಕ ಸುಧಾರಣೆಗೆ ವೇಗ ನೀಡುವುದು ಸರ್ಕಾರದ ಉದ್ದೇಶವಾಗಿದೆ.

ಬ್ಯಾಂಕುಗಳ ವಿಲೀನಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಕೇಂದ್ರ ಸಂಪುಟ ಸಭೆಯು ಈ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ.  ಹಣಕಾಸು ಸಚಿವಾಲಯ ಈ ವಿಲೀನದ ಬಳಿಕದ ಪರಿಣಾಮಗಳ ಕುರಿತು ಸರ್ಕಾರಕ್ಕೆ ವರದಿಯನ್ನು ನೀಡುತ್ತದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತದೆ.

ವಿಲೀನದ ಬಳಿಕ ಬ್ಯಾಂಕ್ ನೆಟ್‌ವರ್ಕ್ ವಿಸ್ತಾರವಾಗಲಿದೆ. ಕಡಿಮೆ ವೆಚ್ಚದ ಠೇವಣಿಗಳು, ಗ್ರಾಹಕರನ್ನು ತಲುಪುವುದು, ಕಾರ್ಯಾಚರಣೆ, ವಿಸ್ತಾರ ವ್ಯಾಪ್ತಿ ಸೇರಿದಂತೆ ಇತರ ಸೇವೆಗಳ ಕುರಿತು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಲಾಗುತ್ತದೆ.

ವಿಲೀನದ ಬಳಿಕ ಎಲ್ಲಾ ವ್ಯಾಪಾರೋದ್ಯಮ, ಆಸ್ತಿಗಳು, ಹಕ್ಕುಗಳು, ಬಾಧ್ಯತೆಗಳು,  ಪರವಾನಗಿಗಳು, ಅನುಮೋದನೆಗಳು ಮತ್ತು ಇತರ ವ್ಯವಸ್ಥೆಗಳು ಮತ್ತು ಎಲ್ಲಾ ಸಾಲಗಳು, ಕರಾರುಗಳು  ವಿಲೀನ  ಸ್ವೀಕರಿಸಿದ ಬ್ಯಾಂಕಿನ ಹೊಣೆಗಾರಿಕೆಗಳಾಗುತ್ತದೆ.

ಬ್ಯಾಂಕಿನ ಪ್ರತೀ ಖಾಯಂ ಮತ್ತು ಸಕ್ರಮಗೊಂಡ ಅಧಿಕಾರಿ ಅಥವಾ ಸಿಬ್ಬಂದಿಗಳು  ವಿಲೀನ   ಸ್ವೀಕರಿಸಿದ ಬ್ಯಾಂಕಿನ ಅಧಿಕಾರಿ ಅಥವಾ ಸಿಬ್ಬಂದಿಯಾಗಿ ಅಧಿಕಾರ/ ಸೇವೆಗಳಲ್ಲಿ ಮುಂದುವರಿಯುತ್ತಾರೆ.  ವಿಲೀನಗೊಂಡ ಬ್ಯಾಂಕುಗಳ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಲಭಿಸುವ  ವೇತನ ಮತ್ತು ಇತರ ಭತ್ತೆಗಳು ಅವರು  ವಿಲೀನಗೊಳ್ಳುವುದಕ್ಕೆ ಮೊದಲು ಆಯಾ ಬ್ಯಾಂಕುಗಳಲ್ಲಿ ಪಡೆಯುತ್ತಿದ್ದುದಕ್ಕಿಂತ ಕಡಿಮೆ ಆಗುವುದಿಲ್ಲ.

ವಿಲೀನದ ಬಳಿಕ ಬ್ಯಾಂಕಿನ ಮಂಡಳಿಯು ವಿಲೀನಗೊಂಡ ಬ್ಯಾಂಕುಗಳ ಎಲ್ಲಾ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಹಿತರಕ್ಷಣೆಯನ್ನು ಖಾತ್ರಿಪಡಿಸತಕ್ಕದ್ದು ಎಂದು ಸರ್ಕಾರ ಷರತ್ತನ್ನು ಹಾಕುತ್ತದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಬ್ಯಾಂಕುಗಳ ವಿಲೀನದ ಕುರಿತು ಘೋಷಣೆಯನ್ನು ಮಾಡಲಾಗುತ್ತದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular